ರಾಮನಗರ ಜಿಲ್ಲೆಯ ಹಾರೋಹಳ್ಳಿ ಪಟ್ಟಣದಲ್ಲಿ ಬುಧವಾರ ತಾಲೂಕಿನ ಬರಪೀಡಿತ ಪ್ರದೇಶಗಳ ವೀಕ್ಷಣೆ ಮತ್ತು ರೈತರ ಜೊತೆ ಸಮಾಲೋಚನೆ ಕಾರ್ಯಕ್ರಮವು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆಯಿತು.
ಈ ವೇಳೆ ರಾಮೋಹಳ್ಳಿಯ ರೈತ ರಾಮಚಂದ್ರ ಎಂಬುವವರು, ”ನಾವು ಬಿತ್ತನೆ ಮಾಡಿದ್ದರೂ ಮಳೆ ಇಲ್ಲದೆ ಬೆಳೆ ಬರುವ ಗ್ಯಾರಂಟಿ ಇಲ್ಲ. ನೀವು ಕೊಡುವ ಬರ ಪರಿಹಾರದ ಚೆಕ್ ಕೇವಲ ₹100, ₹150. ಹೆಚ್ಚಿಗೆ ಎಂದರೆ ₹500 ಕೊಟ್ಟರೆ ದೊಡ್ಡದು. ಇದು ಯಾವುದಕ್ಕೂ ಸಾಲುವುದಿಲ್ಲ. ಬೆಳೆಹಾನಿ ಮತ್ತು ಬರ ಪರಿಹಾರವು ರೈತರ ನಷ್ಟ ತುಂಬಿ ಕೊಡುವಂತಿರಬೇಕು” ಎಂದು ತನ್ನ ಅಳಲನ್ನು ತೋಡಿಕೊಂಡ ಬೆಳವಣಿಗೆ ನಡೆಯಿತು.
ಇದೇ ವೇಳೆ ಸಮಾಲೋಚನೆ ಕಾರ್ಯಕ್ರಮದಲ್ಲಿ ಹಲವು ಮಂದಿ ರೈತರು, ‘ಹಾರೋಹಳ್ಳಿ ಹಲವು ವಿಷಯದಲ್ಲಿ ಹಿಂದುಳಿದಿದೆ. ತಾಲೂಕು ಕಚೇರಿಗಳು, ಆಸ್ಪತ್ರೆ, ಶಾಲಾ- ಕಾಲೇಜು ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಕೈಗಾರಿಕಾ ಪ್ರದೇಶವಿದ್ದರೂ ಜನ ಇಂದಿಗೂ ತಮ್ಮ ಕಸುಬನ್ನೇ ಅವಲಂಬಿಸಿದ್ದಾರೆ. ಬರದಿಂದ ತತ್ತರಿಸಿರುವ ಅವರ ನೆರವಿಗೆ ಸರ್ಕಾರ ಬರಬೇಕು’ ಎಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ, ‘ಕೇಂದ್ರ ಸರ್ಕಾರ ಸ್ಪಂದಿಸದಿದ್ದರೂ, ರಾಜ್ಯ ಸರ್ಕಾರ ಸದಾ ರೈತರ ಪರವಾಗಿರಲಿದೆ. ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ, ಹೊಸ ತಾಲೂಕು ಆಗಿರುವ ಹಾರೋಹಳ್ಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿದ್ದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿ, ‘ನಾವೆಲ್ಲರೂ ರೈತಾಪಿ ವರ್ಗದವರು. ರೇಷ್ಮೆ ಮತ್ತು ಹಾಲು ಉತ್ಪಾದನೆಯೇ ನಮ್ಮ ಬದುಕಿಗೆ ಆಧಾರ. ಈ ಸಲ ಬರದಿಂದಾಗಿ ಇವುಗಳ ಮೇಲೆ ಕರಿಮೋಡ ಆವರಿಸಿದೆ. ಮಳೆ ಕೊರತೆಯಿಂದಾಗಿ ಬಿತ್ತನೆ ಕುಂಠಿತವಾಗಿದೆ. ಹಾಲು ಖರೀದಿ ದರ ಕಡಿತ ಮಾಡಿರುವುದು ಹೈನುಗಾರಿಕೆ ನೆಚ್ಚಿಕೊಂಡಿರುವವರಿಗೆ ಹೊಡೆತ ಕೊಟ್ಟಿದೆ. ರೇಷ್ಮೆಗೆ ಪ್ರೋತ್ಸಾಹ ಸಿಗುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ’ ಎಂದು ಸಚಿವರಲ್ಲಿ ಮನವಿ ಮಾಡಿದರು.