ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಗಿರುವ ಸಾಲ ವಂಚನೆ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.
ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗಾಗಿ ಪಡೆದಿರುವ ಸಾಲ ಮತ್ತು ಬಡ್ಡಿಯ ಹಣ ಸೇರಿ ಭರ್ತಿ 439 ಕೋಟಿ ರೂಪಾಯಿ ಪಾವತಿಸದೆ ವಂಚಿಸಿರುವ ಆರೋಪದ ಮೇಲೆ ತಮ್ಮ ವಿರುದ್ದದ ದೂರು ಮತ್ತು ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಡೆಸಿದೆ.
ಇದನ್ನು ಓದಿದ್ದೀರಾ? ರಾಯಚೂರು | ಡಿಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುವ ನಿರೀಕ್ಷೆ : ರಮೇಶ್ ಜಾರಕಿಹೊಳಿ
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಇದುವರೆಗೆ ನಡೆಸಿರುವ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸೂಚಿಸಿದ್ದಾರೆ.
ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ಹೇಳಿರುವ ಕೋರ್ಟ್ ಮಧ್ಯಂತರ ಆದೇಶ ವಿಸ್ತರಣೆ ಮಾಡಿದೆ. ವಿಚಾರಣೆಯನ್ನು ಡಿಸೆಂಬರ್ 19ಕ್ಕೆ ಮುಂದೂಡಲಾಗಿದೆ. ಈ ಹಿಂದೆ ಮುಂದಿನ ವಿಚಾರಣೆವರೆಗೂ ರಮೇಶ್ ಜಾರಕಿಹೊಳಿ ವಿರುದ್ಧ ಯಾವುದೇ ಕ್ರಮ ಬೇಡ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.
ಇದನ್ನು ಓದಿದ್ದೀರಾ? ಬೆಳಗಾವಿ | ಕೋ-ಆಪರೇಟೀವ್ ಕ್ರೆಡಿಟ್ ಬ್ಯಾಂಕ್ ವಂಚನೆ ಪ್ರಕರಣ; ʼಹಣ ಮರಳಿ ಕೊಡಿಸುವೆʼ ಎಂದ ರಮೇಶ್ ಜಾರಕಿಹೊಳಿ
ವಿಚಾರಣೆ ವೇಳೆ ರಮೇಶ್ ಜಾರಕಿಹೊಳಿ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಹಿರಿಯ ವಕೀಲ ರವಿ ಬಿ. ನಾಯಕ್ ಕೋರಿದರು. ಹಾಗೆಯೇ ಅರ್ಜಿದಾರರನ್ನು ತನಿಖೆಗೆ ಸಹಕರಿಸಲು ಸೂಚಿಸಬೇಕು ಎಂದು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಕೋರಿದರು.
ಏನಿದು ಪ್ರಕರಣ?
ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಮತ್ತಿಬ್ಬರು ನಿರ್ದೇಶಕರಾಗಿದ್ದ ವಸಂತ್ ಪಾಟೀಲ್ ಮತ್ತು ಶಂಕರ್ ಪವಾಡೆ ಅವರು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ಗೆ 439 ಕೋಟಿ ಸಾಲ ಮರು ಪಾವತಿ ಮಾಡದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
