ಮೈತ್ರಿ ಸರ್ಕಾರ ಪತನವಾಗಿದ್ದೇ ಡಿ.ಕೆ ಶಿವಕುಮಾರ್ ಅವರಿಂದ. ನನ್ನ ಕೈಯನ್ನು ಮೇಲೆ ಎತ್ತಿ ಜೋಡೆತ್ತು ಎಂದಿದ್ದನ್ನು ಕೇಳಿ ಮೋಸ ಹೋದೆ. ನನ್ನನ್ನು ನಡುರಸ್ತೆಯಲ್ಲಿ ಕೈಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಮನಗರದಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು,. “ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಪತನವಾಗುತ್ತದೆ. 2024ರಲ್ಲಿ ಮತ್ತೆ ವಿಧಾನಸಭಾ ಚುನಾವಣೆ ನಡೆಯುತ್ತದೆ” ಎಂದು ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ.
“ಡಿ.ಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗುವುದು ಗ್ಯಾರಂಟಿ. ಅವರು ಶಾಶ್ವತವಾಗಿ ತಿಹಾರ್ ಜೈಲಿಗೆ ಹೋದರೂ ಅಚ್ಚರಿ ಇಲ್ಲ. 2024ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಆ ವ್ಯಕ್ತಿ (ಡಿ.ಕೆ ಶಿವಕುಮಾರ್) ಅಭ್ಯರ್ಥಿ ಆಗುವುದೇ ಅನುಮಾನ” ಎಂದು ಹೇಳಿದ್ದಾರೆ.
“ನನ್ನ ಕೈಹಿಡಿದು ಜೋಡೆತ್ತು ಎಂದವರು ನಡುರಸ್ತೆಯಲ್ಲಿ ಕೈ ಬಿಟ್ಟರು. ಅವರ ಮಾತುಗಳನ್ನು ನಂಬಿ ನಾನು ಮೋಸ ಹೋದೆ. 2019ರಲ್ಲಿ ಸರ್ಕಾರ ಹೋಗಿದ್ದು ಡಿ.ಕೆ.ಶಿವಕುಮಾರ್ ಅವರಿಂದಲೇ ಹೊರತು ನನ್ನಿಂದ ಅಲ್ಲ” ಎಂದು ಆರೋಪಿಸಿದ್ದಾರೆ.
“ಮಂಡ್ಯ ಚುನಾವಣೆಯಲ್ಲಿ ನಿಖಿಲ್‌ಗೆ ಮೋಸ ಮಾಡಿದ ಹಾಗೆ, ಇಲ್ಲಿಯೂ (ರಾಮನಗರ) ನಾವು ಮಾಡಿದ್ದರೆ ಆ ವ್ಯಕ್ತಿ (ಡಿ.ಕೆ.ಸುರೇಶ್) ಕಥೆ ಅಂದೇ ಮುಗಿದು ಹೋಗುತ್ತಿತ್ತು. ಆದರೆ, ನಾವು ಮೈತ್ರಿ ಧರ್ಮ ಪಾಲಿಸಿದೆವು. ಅವರು ನಮಗೆ ಕೇಡು ಬಗೆದರು” ಎಂದು ಡಿಕೆ ಸಹೋದರರ ವಿರುದ್ಧ ಕಡಿಕಾರಿದರು.