ರಾಮನಗರ ರೈತರ ಜಿಲ್ಲೆಯಾಗಬೇಕೇ ಹೊರತು ರಿಯಲ್ ಎಸ್ಟೇಟ್‌ ತಾಣವಲ್ಲ: ಸಿಎಂಗೆ ಸಂಸದ ಸಿ ಎನ್ ಮಂಜುನಾಥ್ ಪತ್ರ

Date:

Advertisements

ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವುದು ಯಾವುದೇ ಕಾರಣಕ್ಕೂ ಸಮಂಜಸವಲ್ಲ. ಬೆಂಗಳೂರು ಬ್ರಾಂಡ್ ಹೆಸರಿನಲ್ಲಿ ಅಭಿವೃದ್ಧಿಗಾಗಿ ರಾಮನಗರ ಜಿಲ್ಲೆಯ ಹೆಸರು ಬದಲಿಸುವ ಬದಲು, ರಾಮನಗರವನ್ನೇ ಬ್ರಾಂಡ್ ಮಾಡಿಕೊಂಡು ಅಭಿವೃದ್ಧಿ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ ಎನ್ ಮಂಜುನಾಥ್ ಆಗ್ರಹಿಸಿದ್ದಾರೆ.

ಮರುನಾಮಕರಣ ಪ್ರಸ್ತಾವವನ್ನು ತಿರಸ್ಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, “ಅಭಿವೃದ್ಧಿ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ 17 ವರ್ಷಗಳ ಹಿಂದೆ ಜಿಲ್ಲೆಯನ್ನು ರಚಿಸಲಾಗಿದೆ. ಈಗಾಗಲೇ ವಿಸ್ತಾರವಾಗಿರುವ ಬೆಂಗಳೂರು ಮಹಾನಗರದ ಜನರಿಗೆ ಮೂಲಸೌಕರ್ಯ ಒದಗಿಸುವುದೇ ಸವಾಲಾಗಿದೆ. ಹೀಗಿರುವಾಗ, ಸುಂದರವಾಗಿರುವ ರಾಮನಗರವನ್ನು ಅಲ್ಲಿಗೆ ಜೋಡಿಸುವುದು ಅವೈಜ್ಞಾನಿಕ” ಎಂದಿದ್ದಾರೆ.

“ಕೇವಲ ಬೆಂಗಳೂರು ಎಂಬ ಹೆಸರಿನಿಂದಲೇ ಜಿಲ್ಲೆಯು ಅಭಿವೃದ್ಧಿಯಾಗುತ್ತದೆ ಸರಿಯಲ್ಲ. ಹಾಗಿದ್ದರೆ ಕರ್ನಾಟಕ ಏಕೀಕರಣವಾದಾಗಿನಿಂದಲೂ ರಾಮನಗರ 1986ರವರೆಗೆ ಬೆಂಗಳೂರು ಜಿಲ್ಲೆಯಲ್ಲಿ ಮತ್ತು 2007ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿತ್ತು. ಹೀಗಿದ್ದರೂ ಯಾಕೆ ಅಭಿವೃದ್ಧಿ ಆಗಲಿಲ್ಲ” ಎಂದು ಪ್ರಶ್ನಿಸಿದ್ದಾರೆ.

Advertisements

“ರಾಮನಗರ ಜಿಲ್ಲೆಯು ರೈತರ ಜಿಲ್ಲೆಯಾಗಿರಬೇಕೇ ಹೊರತು ರಿಯಲ್ ಎಸ್ಟೇಟ್‌ ತಾಣವಾಗವಾರದು. ಇಲ್ಲಿನ ಭೂಮಿಗೆ ಹೆಚ್ಚಿನ ಬೆಲೆ ಸಿಗುವ ಬದಲು, ಈ ಭೂಮಿಯಲ್ಲಿ ಬೆಳೆಯುವ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತಾಗಬೇಕು” ಎಂದು ಹೇಳಿದ್ದಾರೆ.

“ಈಗಾಗಲೇ ರಾಜಧಾನಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವಿದೆ. ಈ ನಗರದ ಜಿಲ್ಲೆಯೊಳಗೆ ಬೆಂಗಳೂರು ದಕ್ಷಿಣ ತಾಲ್ಲೂಕು ಇದೆ. ಹೀಗಿರುವಾಗ ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸಿದರೆ ಹಲವು ಗೊಂದಲಗಳು ಸೃಷ್ಟಿಯಾಗುತ್ತವೆ. ಅಲ್ಲದೆ ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಗೆ ಬೆಂಗಳೂರು ಪೂರ್ವ ಚಿಕ್ಕಬಳ್ಳಾಪುರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಮಕರಣ ಮಾಡಿ ಎಂಬ ಪ್ರಸ್ತಾವಗಳು ಬರಬಹುದು. ಹಾಗಾಗಿ ಜಿಲ್ಲೆ ಹೆಸರು ಮರುನಾಮಕರಣದ ಪ್ರಸ್ತಾವ ತಿರಸ್ಕರಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ರಾಮನಗರಕ್ಕೆ ಪೌರಾಣಿಕ, ಐತಿಹಾಸಿಕ, ಧಾರ್ಮಿಕ ಹಾಗೂ ಭಾವನಾತ್ಮಕ ಹಿನ್ನೆಲೆ ಇದೆ. ಕ್ಲೋಸ್‌ಪೇಟೆಯಾಗಿದ್ದ ಈ ಊರಿಗೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ರಾಮನಗರ ಎಂದು ನಾಮಕರಣ ಮಾಡಿದರು. ಧಾರ್ಮಿಕ ಗುರುಗಳಾದ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಇಲ್ಲಿಯವರು. ಜಿಲ್ಲೆಯು ರಾಜ್ಯಕ್ಕೆ ಐದು ಬಾರಿ ಮುಖ್ಯಮಂತ್ರಿ ಪದವಿ ನೀಡಿದೆ. ಇಲ್ಲಿ ಗೆದ್ದು ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ದೇವೇಗೌಡರು ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ರೇಷ್ಮೆ ನಾಡು ಖ್ಯಾತಿಯ ನಗರವು ವಿಶೇಷ ಬೆಟ್ಟಗುಡ್ಡ, ದೇವಸ್ಥಾನ, ನದಿಗಳು ಸೇರಿದಂತೆ ಹಲವು ಹಿರಿಮೆಗಳನ್ನು ಹೊಂದಿದೆ. ಅದನ್ನು ರಾಮನಗರ ಜಿಲ್ಲೆ ಹೆಸರಿನಲ್ಲೇ ಉಳಿಸಿಕೊಳ್ಳಬೇಕು” ಎಂದು ಪ್ರತಿಪಾದಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X