- ‘ಕರ್ನಾಟಕ ಸರ್ಕಾರ ದೀಪಾವಳಿ ಉಡುಗೊರೆಯಾಗಿ ನೀಡಿದೆ’
- ‘ರೈತರ ಬಗ್ಗೆ ನಮ್ಮ ಸರ್ಕಾರಕ್ಕೆ ಇರುವ ಕಾಳಜಿ ಇದು’
ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಕರ್ನಾಟಕ ಸರ್ಕಾರ ದೀಪಾವಳಿ ಉಡುಗೊರೆಯಾಗಿ ರನ್ನ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭ ಮಾಡುತ್ತಿದ್ದೇವೆ ಎಂದು ಅಬಕಾರಿ ಮತ್ತು ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ತಿಳಿಸಿದ್ದಾರೆ.
“ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನಲ್ಲಿರುವ ರನ್ನ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ನೀಡಿ 2023-24ನೇ ಸಾಲಿನಲ್ಲಿ ಕಬ್ಬು ಅರೆಯಲು ಅನುಮತಿ ನೀಡಲಾಗಿದೆ” ಎಂದಿದ್ದಾರೆ.
“ಅಪೆಕ್ಸ್ ಅಥವಾ ಬಿಡಿಸಿಸಿ ಬ್ಯಾಂಕ್‌ನಿಂದ 40 ಕೋಟಿ ರೂ. ಸಾಲ ಪಡೆಯಲು ಸರ್ಕಾರದ ಖಾತರಿ ನೀಡಲು ಸರ್ಕಾರ ಒಪ್ಪಿದೆ. ಜೊತೆಗೆ ಗುತ್ತಿಗೆ ನೀಡಲು ಸಿದ್ದಪಡಿಸಿರುವ ಟೆಂಡರ್ ಡ್ಯಾಕುಮೆಂಟ್‌ಗೂ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕೆಟಿಪಿಪಿ ಆ್ಯಕ್ಟ್ 1999 ನಿಯಮ 2000 ಪ್ರಕಾರ ಟೆಂಡರ್ ಕರೆಯಲು ಅನುಮತಿ ನೀಡಲಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? 100 ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ 100 ಎಂಜನಿಯರಿಂಗ್ ಕಾಲೇಜು ದತ್ತು: ಪ್ರಿಯಾಂಕ್ ಖರ್ಗೆ
“ರೈತರ ಹಿತ ಕಾಯುವಲ್ಲಿ ನಮ್ಮ ಸರ್ಕಾರ ಬದ್ದವಾಗಿದೆ. ಕೊಟ್ಟ ಮಾತಿನಂತೆ ನಿರಂತರವಾಗಿ ರನ್ನ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಶ್ರಮಿಸಿದ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಸಭೆಯಲ್ಲಿ ಅನುಮತಿ ಸಿಗುವ ಮೂಲಕ ಫಲ ಸಿಕ್ಕಿದೆ. ಲೀಸ್ ಜೊತೆಗೆ ರೂ 40 ಕೋಟಿ ಸಾಲಕ್ಕೆ ಶ್ಯೂರಿಟಿ ನೀಡಿರುವುದು ರೈತರ ಬಗ್ಗೆ ನಮ್ಮ ಸರ್ಕಾರಕ್ಕೆ ಇರುವ ಕಾಳಜಿ ತೋರಿಸುತ್ತದೆ. ಶೀಘ್ರದಲ್ಲೇ ಟೆಂಡರ್ ಕರೆದು ಉತ್ತಮ ಬಿಡ್ ದಾರರಿಗೆ ಗುತ್ತಿಗೆ ನೀಡುವ ಮೂಲಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಆದಷ್ಟು ಬೇಗ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.