ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ರಾಜ್ಯಕ್ಕೆ ಬರುವುದು ಅನುಮಾನ ಎನ್ನಲಾಗಿದೆ.
ಮಹಿಳೆಯ ಅಪಹರಣ ಪ್ರಕರಣದಲ್ಲಿ ತಂದೆ ಹೆಚ್ ಡಿ ರೇವಣ್ಣ ಬಂಧನವಾಗುತ್ತಿದ್ದಂತೆ ಪುತ್ರ ಪ್ರಜ್ವಲ್ ರೇವಣ್ಣ ಕೂಡ ಎಸ್‌ಐಟಿಗೆ ಶರಣಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಭಾನುವಾರ ಪ್ರಜ್ವಲ್‌ನ ಬಂಧನ ಆಗಿಯೇ ಬಿಡುತ್ತದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಯಿತು. ಸಂಜೆಯಿಂದಲೇ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ಆಗಮನಕ್ಕಾಗಿ ನೂರಾರು ಮಾಧ್ಯಮ ಪ್ರತಿನಿಧಿಗಳು ಕಾಯುತ್ತಿರುವುದು ಕಂಡುಬಂತು.
ದುಬೈಯಿಂದ 7ಗಂಟೆಗೆ ಬಂದಿಳಿದ ವಿಮಾನದಲ್ಲಿ ಪ್ರಜ್ವಲ್ ಬರಲಿಲ್ಲ. ನಿರಾಸೆಯಿಂದ ಎಲ್ಲರೂ ಮರಳಿದರು. ರಾತ್ರಿ ಆಗಮಿಸುವ ನಿರೀಕ್ಷೆ ಇತ್ತು. ಆಗಲೂ ಪ್ರಜ್ವಲ್ ಬರಲಿಲ್ಲ. ಈ ವಿಳಂಬಕ್ಕೆ ನಾಳೆಯ ಮತದಾನ ಕಾರಣ ಎನ್ನಲಾಗಿದೆ.
ಚುನಾವಣೆ ಹೊತ್ತಲ್ಲಿ ದೇಶಾದ್ಯಂತ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಕೇಸ್ ಭಾರಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಇದನ್ನೇ ಅಸ್ತ್ರ ಮಾಡಿಕೊಂಡು ಬಿಜೆಪಿ, ಜೆಡಿಎಸ್ ಮೈತ್ರಿಯನ್ನು ಟೀಕಿಸುತ್ತಿದೆ. ರಾಷ್ಟ್ರ ನಾಯಕರೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಪ್ರಜ್ವಲ್ ಕೇಸ್ ಅನ್ನೇ ದಾಳ ಮಾಡಿಕೊಂಡಿದ್ದಾರೆ. ಹೀಗಾಗಿ ಮತದಾನದ ಹಿಂದಿನ ದಿನ ಅಥವಾ ಮತದಾನದ ದಿನ ಪ್ರಜ್ವಲ್ ಬಂಧನವಾದರೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮುಜುಗರ ಉಂಟಾಗಿ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಂದ ಪ್ರಜ್ವಲ್‌ಗೆ ಮತದಾನ ಮುಗಿಯುವವರೆಗೂ ರಾಜ್ಯಕ್ಕೆ ಬರದಂತೆ ಸೂಚನೆ ನೀಡಲಾಗಿದೆಯಾ ಎನ್ನುವ ಅನುಮಾನ ಮೂಡುತ್ತಿದೆ.
ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಗಿದ ದಿನವೇ, ಅಂದರೆ ಏಪ್ರಿಲ್ 26ರ ಮಧ್ಯರಾತ್ರಿಯೇ ಪ್ರಜ್ವಲ್ ದೇಶ ಬಿಟ್ಟು ಹೊರದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು. ಮೇ 5ರಂದೇ ಪ್ರಜ್ವಲ್ ಬೆಂಗಳೂರಿಗೆ ಆಗಮಿಸುವ ಪುಕಾರು ಹಬ್ಬಿತ್ತು. ಬೆಂಗಳೂರು, ಮಂಗಳೂರು, ಗೋವಾ ಅಥವಾ ಕೊಚ್ಚಿ ಏರ್ಪೋರ್ಟ್ಗಳಲ್ಲಿ ಎಸ್ಐಟಿ ಅಧಿಕಾರಿಗಳು ಕಾದು ಕುಳಿತಿದ್ದರು. ಆದರೆ ಪ್ರಜ್ವಲ್ ಬರಲೇ ಇಲ್ಲ.
ಮೂಲಗಳ ಪ್ರಕಾರ ರಾಜ್ಯದ 2ನೇ ಹಂತದ ಮತದಾನ ಬಳಿಕ ಪ್ರಜ್ವಲ್ ಶರಣಾಗತಿಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲು ಸಿಬಿಐಗೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಮನವಿ ಮಾಡಿದ್ದಾರೆ. ಪ್ರಜ್ವಲ್‌ಗೆ ನೋಟಿಸ್ ನೀಡಲು ಮಹಿಳಾ ಆಯೋಗವೂ ಸಿದ್ಧತೆ ನಡೆಸಿದೆ.
ಪ್ರಜ್ವಲ್ಗಾಗಿ ಎಸ್ಐಟಿ ಅಧಿಕಾರಿಗಳು ಎರಡು ದಿನದಿಂದ ಕಾಯುತ್ತಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲೇ ಎಸ್ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದು, ಇಮಿಗ್ರೇಷನ್ನಲ್ಲಿ ಬೆಂಗಳೂರಿಗೆ ಬರುವ ವಿಮಾನಗಳ ಪ್ರಯಾಣಿಕರ ಲಿಸ್ಟ್ ಪರಿಶೀಲನೆ ನಡೆಸಿದ್ದಾರೆ. ಪ್ರಜ್ವಲ್ ಪಾಸ್ಪೋರ್ಟ್ ನಂಬರ್ ಸಮೇತ ಟಿಕೆಟ್ ಪರಿಶೀಲನೆ ಮಾಡಿದ್ದಾರೆ. ಆದರೆ, ಈವರೆಗೂ ಯಾವುದೇ ಫ್ಲೈಟ್ನಲ್ಲಿ ಪ್ರಜ್ವಲ್ ಟಿಕೆಟ್ ಬುಕ್ ಆಗಿಲ್ಲ. ದುಬೈ, ಮಸ್ಕತ್, ಫ್ರಾಂಕ್ಫರ್ಟ್ ಸೇರಿ ಹಲವು ದೇಶಗಳ ವಿಮಾನಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಎರಡು ಪಾಳಿಯಲ್ಲಿ ಎರಡು ತಂಡಗಳಿಂದ ಏರ್ಪೋಟ್ನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಜ್ವಲ್‌ಗೆ ಬಂದರೆ ಏರ್ಪೋಟ್ನಿಂದಲೇ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
