- ಕಲಬುರಗಿ ಎರಡನೇ ಜೆಎಂಎಫ್ಸಿ ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿ ಆದೇಶ
- ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಸಿಐಡಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಬಂಧನವಾಗಿರುವ ಪ್ರಕರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ನನ್ನು ಎಂಟು ದಿನ ಸಿಐಡಿ ಕಸ್ಟಡಿಗೆ ನೀಡಿ ಕಲಬುರಗಿ ಎರಡನೇ ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಆರ್ ಡಿ ಪಾಟೀಲನ ನ್ಯಾಯಾಂಗ ಬಂಧನ ಅವಧಿ ಬುಧವಾರ ಮುಗಿದಿದ್ದು, ತಮ್ಮ ವಶಕ್ಕೆ ನೀಡುವಂತೆ ಸಿಐಡಿ, ಕಲಬುರಗಿ ಎರಡನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆರೋಪಿ ಆರ್ಡಿ ಪಾಟೀಲ್ನನ್ನು ಎಂಟು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿದೆ.
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ದಾಖಲಾಗಿರುವ ಪರೀಕ್ಷೆ ಅಕ್ರಮದ ಕೇಸ್ಗಳನ್ನು ಪೊಲೀಸ್ ತನಿಖಾಧಿಕಾರಿಗಳು ಈಗಾಗಲೇ ಪ್ರಕರಣ ಫೈಲ್ ಗಳನ್ನು ಸಿಐಡಿ ತನಿಖಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಕೆಇಎ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ ಪ್ರಕರಣ ಪೊಲೀಸರಿಂದ ಹಸ್ತಾಂತರ ಆಗುತ್ತಿದ್ದಂತೆಯೇ ಸಿಐಡಿ ಬೇಟೆ ಶುರು ಮಾಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಂಶವಾದಿ ರಾಜಕಾರಣ- ಬಿಜೆಪಿ ಎರಡೆಳೆ ನಾಲಗೆಗೆ ಇನ್ನೆಷ್ಟು ದೊಡ್ಡ ಸಾಕ್ಷಿ ಬೇಕು?
ಸಿಐಡಿ ಡಿವೈಎಸ್‌ಪಿ ತನ್ವೀರ್ ಮತ್ತು ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಮತ್ತೋರ್ವ ಅಭ್ಯರ್ಥಿ ಸೇರಿ ಮೂವರನ್ನು ಸಿಐಡಿ ವಶಕ್ಕೆ ಪಡೆದಿದೆ. ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ಸೂಚನೆಯಂತೆ ಅಭ್ಯರ್ಥಿಗಳಿಗೆ ಬ್ಲೂಟೂತ್ ಸಪ್ಲೈ ಮಾಡಿರುವ ಆರೋಪದಡಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕಲಬುರಗಿ ಜಿಲ್ಲೆಯಲ್ಲಿ ಮೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ದಾಖಲಾದ ಐದು ಪ್ರಕರಣ ಸೇರಿ ಒಟ್ಟು ಎಂಟು ಪ್ರಕರಣಗಳ ದಾಖಲೆಗಳು ಸಿಐಡಿ ಕೈಗೆ ತಲುಪಿದ್ದು, ಸಿಐಡಿ ತನಿಖಾಧಿಕಾರಿಗಳು ಕೇಸ್ ಸ್ಟಡಿ ಶುರು ಮಾಡಿದ್ದಾರೆ. ಖುದ್ದು ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ತನಿಖಾಧಿಕಾರಿ ಡಿವೈಎಸ್ ಪಿ ತನ್ವೀರ್ ಒಳಗೊಂಡ ಸಿಐಡಿ ತನಿಖಾ ತಂಡ ಪರೀಕ್ಷೆ ಅಕ್ರಮದ ಜಾಡು ಹಿಡಿದು ಭೇದಿಸಲು ಮುಂದಾಗಿದ್ದಾರೆ.