2021ರಲ್ಲಿ ರದ್ದಾದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಮರಳಿ ಜಾರಿಗೊಳಿಸಬೇಕೆಂದು ಹೇಳಿರುವ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ಅವರನ್ನು ಬಿಜೆಪಿ ಉಚ್ಚಾಟಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಣಾವತ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ರದ್ದಾದ ಕೃಷಿ ಕಾನೂನುಗಳನ್ನು ಮರಳಿ ತರುವ ಯಾವುದೇ ಪ್ರಯತ್ನಗಳಿಗೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ನಾಚನ್ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಡೆದ ಸ್ಥಳೀಯ ಜಾತ್ರೆಯಲ್ಲಿ ಕಂಗನಾ ಭಾವಹಿಸಿ ಮಾತನಾಡಿದ್ದಾರೆ. “ಕಂಗನಾ ಹೇಳಿಕೆ ವಿವಾದಕ್ಕೆ ಸಿಲುಕಬಹುದು ಎಂದು ನನಗೆ ತಿಳಿದಿದೆ. ಮೂರು ಕೃಷಿ ಕಾನೂನುಗಳನ್ನು ಮರಳಿ ತರಬೇಕು. ಆ ಕಾನೂನುಗಳು ರೈತರ ಕಲ್ಯಾಣ-ಆಧಾರಿತ ಕಾನೂನುಗಳೆಂದು ನಾನು ನಂಬುತ್ತೇನೆ. ರೈತರು ಈ ಕಾನೂನುಗಳ ಜಾರಿಗೆ ಒತ್ತಾಯಿಸಬೇಕು” ಎಂದು ಹೇಳಿದ್ದಾರೆ.
ಕಂಗನಾ ಹೇಳಿಕೆ ಖಂಡಿಸಿ ಬಿಜೆಪಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. “ಕಂಗನಾ ಅವರು ಕೃಷಿ ಕಾನೂನುಗಳನ್ನು ಮರಳಿ ತರಬೇಕೆಂದು ಪ್ರತಿಪಾದಿಸಿದ್ದಾರೆ. ಒಂದು ವರ್ಷದ ಸುದೀರ್ಘ ರೈತ ಹೋರಾಟದ ವೇಳೆ, 750ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದರೂ ಬಿಜೆಪಿ ರೈತ ವಿರೋಧಿ ನಿಲುವು ಅನುಸರಿಸುತ್ತಿದೆ. 750 ರೈತರು ಹುತಾತ್ಮರಾದ ನಂತರವೂ ಬಿಜೆಪಿ ಮತ್ತು ಮೋದಿ ಸರ್ಕಾರ ಪಾಠ ಕಲಿತಿಲ್ಲ. ಅವರು ರೈತ ವಿರೋಧಿ ಕರಾಳ ಕಾನೂನುಗಳ ಮರು-ಅನುಷ್ಠಾನಕ್ಕೆ ಯತ್ನಿಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು ಸೇರಿದಂತೆ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ” ಎಂದು ಖರ್ಗೆ ಕಿಡಿಕಾರಿದ್ದಾರೆ.
ಕಾಂಗ್ರೆಸ್ ವಕ್ತಾರ ಶಕ್ತಿಸಿನ್ಹ್ ಗೋಹಿಲ್ ಅವರು ಕಂಗನಾ ಹೇಳಿಕೆಯನ್ನು ಖಂಡಿಸದ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. “ಪ್ರಧಾನಿ ಮೋದಿಯವರು ಆಕೆಯ ಹೇಳಿಕೆಯನ್ನು ಯಾಕೆ ಖಂಡಿಸಿಲ್ಲ? ಆಕೆಯ ಹೇಳಿಕೆಯನ್ನು ಬಿಜೆಪಿ ಒಪ್ಪದಿದ್ದರೆ, ಆಕೆಯನ್ನು ಪಕ್ಷದಿಂದ ಯಾಕೆ ಉಚ್ಚಾಟಿಸಿಲ್ಲ” ಎಂದು ಪ್ರಶ್ನಿಸಿದ್ದಾರೆ.
“ಕಂಗನಾ ಹೇಳಿಕೆ ವಿಚಾರದಲ್ಲಿ ಬಿಜೆಪಿಯ ಮೌನವು, ತನ್ನ ಪಕ್ಷದ ಕಾಲಾಳುಗಳ ಮೂಲಕ ಕೃಷಿ ಕಾನೂನುಗಳನ್ನು ಮರು ಪರಿಚಯಿಸುವ ಉದ್ದೇಶವನ್ನು ಸೂಚಿಸುತ್ತದೆ. ಕಂಗನಾ ನಿಲುವನ್ನು ಬಿಜೆಪಿ ಖಂಡಿಸುವುದಾದರೆ, ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು” ಎಂದು ಗೋಹಿಲ್ ಆಗ್ರಹಿಸಿದ್ದಾರೆ.