ಲೋಕಸಭೆ ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಕು ಎಂದು ಬೆಂಬಲಿಗರ ಒತ್ತಾಯ ಹೆಚ್ಚಾಗುತ್ತಿದೆ. ಈ ಕುರಿತು ಡಾ. ಯತೀಂದ್ರ ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಕ್ಷ ಸೂಚಿಸಿದರೆ ಆದೇಶ ಪಾಲಿಸಲು ಸಿದ್ದ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನಾಗಲಿ ತಂದೆಯವರಾಗಲಿ ಚರ್ಚೆ ನಡೆಸಿಲ್ಲ. ಚುನಾವಣೆಗೆ ಇನ್ನೂ ಎಂಟು ತಿಂಗಳ ಕಾಲಾವಕಾಶ ಇದೆ. ಚುನಾವಣೆ ಸಮೀಪ ಯಾರು ಸೂಕ್ತ ಅಭ್ಯರ್ಥಿ ಎಂದು ಗೊತ್ತಾಗಲಿದೆ” ಎಂದಿದ್ದಾರೆ.
“ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ, ಆದ್ದರಿಂದ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ. ಒಂದು ವೇಳೆ ನಾನು ಸ್ಪರ್ಧೆ ಮಾಡಬೇಕು ಎಂದು ಪಕ್ಷ ಸೂಚನೆ ನೀಡಿದರೆ ಪಾಲನೆ ಮಾಡಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಾತಿ ದೌರ್ಜನ್ಯ ಕೊನೆಗೊಳಿಸಿ : ಮರ್ಯಾದೆಗೇಡು ಹತ್ಯೆಯ ವಿರುದ್ಧ ನಾಗರಿಕರ ಪ್ರತಿಭಟನೆ
ಸಣ್ಣ ಸರ್ಕಾರಿ ಸ್ಥಾನಮಾನ ನೀಡಿದರೂ ನಿಭಾಯಿಸುತ್ತೇನೆ: ಯತೀಂದ್ರ ಸಿದ್ದರಾಮಯ್ಯ
ವರುಣ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಸಮಯ ನೀಡದ ಹಿನ್ನೆಲೆ ಕ್ಷೇತ್ರದಲ್ಲಿ ತಂದೆಯ ಜವಾಬ್ದಾರಿ ನಿಭಾಯಿಸಲು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಒಲವು ತೋರಿದ್ದಾರೆ.
“ಕಳೆದ ಬಾರಿಯಂತೆ ಸಣ್ಣ ಹುದ್ದೆ ನೀಡಿದರೂ ನಿಭಾಯಿಸುತ್ತೇನೆ. ತಂದೆ ಮುಖ್ಯಮಂತ್ರಿ ಆಗಿರುವುದರಿಂದ ಕ್ಷೇತ್ರದ ಜನರಿಗೆ ಸಮಯ ನೀಡಲಾಗುತ್ತಿಲ್ಲ. ಕ್ಷೇತ್ರದ ಜನರ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಜನರ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಲು ಸರ್ಕಾರಿ ಸ್ಥಾನಮಾನ ಅಗತ್ಯ” ಎಂದಿದ್ದಾರೆ.
“ಹೀಗಾಗಿ ಚಿಕ್ಕ ಸ್ಥಾನಮಾನ ನೀಡಿದರೂ ಸಹಕಾರಿ ಆಗಲಿದೆ. ಕಳೆದ ಬಾರಿ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದರು. ಅದು ದೊಡ್ಡ ಹುದ್ದೆಯಲ್ಲ ಆದರೂ ಅಂತಹದ್ದೇ ಸಣ್ಣ ಹುದ್ದೆ ನೀಡಿದರೇ ಜನರ ಸೇವೆ ಮಾಡಲು ನಾನು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರವನ್ನು ತನ್ನ ತಂದೆ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದರು. ಆದರೆ, ಅವರು ಬೇರೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸಿರಲಿಲ್ಲ.