ಮೀಸಲಾತಿ ಬಗ್ಗೆ ಬಿಜೆಪಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.
ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಜಮಖಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಜಗದೀಶ್, ‘ಕುಲಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ. ಕುಲಕುಲವೆಂದು ಬಡಿದಾಡದಿರಿ, ಕುಲದ ನೆಲೆಯನ್ನೇನಾದರೂ ಬಲ್ಲಿರಾ? ಎಂದು ಹಿಂದಿನ ಕಾಲದಲ್ಲೇ ಹೇಳಿದ್ದರು. ಹಾಗೆ ನೋಡಿದರೆ ಕುಲ ಎನ್ನುವುದು ಇಲ್ಲವೇ ಇಲ್ಲ. ಏನಾದರೂ ಸಿಗುತ್ತೆ ಅಂತ ಮೀಸಲಾತಿ ಸಂಬಂಧ ಬಡಿದಾಟ ನಡೀತಿದೆ. ಮೀಸಲಾತಿ ತೆಗೆದು ಒಗೀರಿ, ಎಲ್ಲರೂ ಟಾಪ್ ಕ್ಲಾಸ್ನಲ್ಲಿ ಬಂದುಬಿಡುತ್ತೀರಾ’ ಎಂದು ಹೇಳಿದ್ದಾರೆ.
ರಿಸರ್ವೇಶನ್ ತೆಗೆದು ಒಗೀರಿ: ಮೀಸಲಾತಿ ಬಗ್ಗೆ ಜಮಖಂಡಿ @BJP4Karnataka ಶಾಸಕನಿಂದ ವಿವಾದಾತ್ಮಕ ಹೇಳಿಕೆ
‘ಏನಾದರು ಸಿಗುತ್ತೆ ಅಂತ ಮೀಸಲಾತಿ ಸಂಬಂಧ ಬಡಿದಾಟ ನಡೀತಿದೆ. ಮೀಸಲಾತಿ ತೆಗೆದು ಒಗೀರಿ, ಎಲ್ಲರೂ ಟಾಪ್ ಕ್ಲಾಸ್ನಲ್ಲಿ ಬಂದುಬಿಡುತ್ತೀರಾ” ಎಂದು ಹೇಳಿಕೆ ನೀಡಿದ ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ
Video: April14news YT Channel pic.twitter.com/j8HKEulvg5
— eedina.com (@eedinanews) October 25, 2023
ಶಾಸಕ ಜಗದೀಶ್ ಅವರ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗುತ್ತಿದ್ದಂತೆಯೇ, ದಲಿತಪರ ಸಂಘಟನೆ ಖಂಡಿಸಿದೆ. ಸಂಘಟನೆ ಕಾರ್ಯಕರ್ತರು ರಾತ್ರೋರಾತ್ರಿ ಬಿಜೆಪಿ ಶಾಸಕ ಜಗದೀಶ್ ಮನೆ ಮುತ್ತಿಗೆಗೆ ಯತ್ನಿಸಿ, ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೆಯಿತು.
ಜಮಖಂಡಿಯ ದೇಸಾಯಿ ಸರ್ಕಲ್‌ನಲ್ಲಿ ಇಂದು(ಬುಧವಾರ) ಅಂಬೇಡ್ಕರ್ ಸೇನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಈ ದಿನ.ಕಾಮ್ ಜೊತೆಗೆ ಮಾತನಾಡಿದ ಅಂಬೇಡ್ಕರ್ ಸೇನೆಯ ಮುಖಂಡ ಸೂರಜ್ ಕುದ್ರಾಣಿ, ಶಾಸಕರು ನೀಡಿರುವ ಹೇಳಿಕೆಯು ಸಂವಿಧಾನ ಬಾಹಿರ. ತಳಸಮುದಾಯಗಳನ್ನು ಮೇಲೆತ್ತಲು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಂಡುಕೊಂಡ ದೂರದೃಷ್ಟಿಯ ಮಾರ್ಗ. ಅದರಿಂದಾಗಿಯೇ ಇಂದು ದಲಿತ ಸಮುದಾಯ ಸೇರಿ ಹಿಂದುಳಿದ ವರ್ಗದ ಮಂದಿ ಮೇಲೆ ಬಂದಿದ್ದಾರೆ. ಅವರ ಏಳಿಗೆಯನ್ನು ಸಹಿಸದೆ ಬಿಜೆಪಿಯವರು ಅದರಲ್ಲೂ ಜನಪ್ರತಿನಿಧಿಗಳು ಈ ರೀತಿ ಹೇಳಿರುವುದು ಸರಿಯಲ್ಲ. ಇದು ಖಂಡನೀಯ. ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಶಾಸಕರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
‘ಜಮಖಂಡಿ ಬಿಜೆಪಿ ಶಾಸಕ ಜಗದೀಶ್ ಗುಡಗಂಟಿಯವರ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ಬಿಜೆಪಿ ಮತ್ತು ಸಂಘಪರಿವಾರದವರು ಹಿಂದಿನಿಂದಲೂ ಮೀಸಲಾತಿ ವಿರೋಧಿಗಳು. ಜನಪ್ರತಿನಿಧಿಗಳು ಈ ರೀತಿಯಾಗಿ ಮೀಸಲಾತಿ ವಿರೋಧಿ ಹೇಳಿಕೆ ನೀಡಿರುವುದು ಸರಿಯಲ್ಲ. ಜನಪ್ರತಿನಿಧಿಯಾದವರಿಗೆ ಸಂವಿಧಾನ ಕಲ್ಪಿಸಿರುವ ಮೀಸಲಾತಿ ಬಗ್ಗೆಯೇ ಈ ರೀತಿಯ ಅಸಡ್ಡೆಯ ಮನೋಭಾವ ಇರುವುದನ್ನು ನೋಡಿದರೆ ಇವರು ಜನಪ್ರತಿನಿಧಿಯಾಗಲು ಅನರ್ಹರು. ಹಣ ಬಲದಿಂದ ಶಾಸಕರಾಗಿ ಆಯ್ಕೆಯಾದವರಿಂದ ಮಾತ್ರ ಇಂತಹ ಹೇಳಿಕೆ ಬರುತ್ತದೆ. ಶಾಸಕರ ಈ ಹೇಳಿಕೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಬಗ್ಗೆ ಇರುವ ಮನಸ್ಥಿತಿಯನ್ನು ತೋರಿಸುತ್ತದೆ. ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇವೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಸಾಗರ ಬಣ)ಯ ಬಾಗಲಕೋಟೆ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬ್ಳೆ ಈ ದಿನ.ಕಾಮ್ ಜೊತೆಗೆ ಮಾತನಾಡುತ್ತಾ ತಿಳಿಸಿದರು.