ಹಳೆಯ ವ್ಯವಸ್ಥೆಯಲ್ಲಿರುವ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳ ಕಟ್ಟಡಗಳನ್ನು ನವೀಕರಿಸಿ, ಮೇಲ್ದರ್ಜೆಗೆ ಏರಿಸಿ, ಆ ಮೂಲಕ ಸುಸಜ್ಜಿತಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಇದರ ಸಹಭಾಗಿತ್ವದಲ್ಲಿ ಸಹಕಾರದಲ್ಲಿ ಆರಂಭಿಸಲಾಗಿರುವ ಮಾಧ್ಯಮ ಆರೋಗ್ಯ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಆರೋಗ್ಯ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಬಳಿಕ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಎಲ್ಲ ತಾಲೂಕುಗಳಲ್ಲಿ ಹಳೆಯ ವ್ಯವಸ್ಥೆಯಲ್ಲಿರುವ ಆಸ್ಪತ್ರೆಗಳನ್ನು ನವೀಕರಣ ಮಾಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಗುರಿಯನ್ನು ಹೊಂದಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಆಸಕ್ತಿ ತೋರುವುದಕ್ಕಿಂತ ಇರುವ ವ್ಯವಸ್ಥೆಯನ್ನು ಉತ್ತಮಗೊಳಿಸಲು ಯೋಚಿಸಬೇಕಾಗಿದೆ. ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 65 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇದ್ದು, ಎಲ್ಲವನ್ನೂ ಈ ವರ್ಷವೇ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು.
ಹೊಸ ನಮ್ಮ ಕ್ಲಿನಿಕ್ ಅನ್ನು ಪ್ರಾರಂಭಿಸುವ ಯೋಚನೆ ಸದ್ಯಕ್ಕಿಲ್ಲ. ಈಗ ಇರುವ ನಮ್ಮ ಕ್ಲಿನಿಕ್ ಗಳಿಗೆ ಪ್ರಯೋಗಾಲಯ ತಜ್ಞರು, ಹೆಚ್ಚುವರಿ ತಪಾಸಣೆಗಳಿಗೆ ಅವಕಾಶ ಕಲ್ಪಿಸಲು ಯೋಚಿಸಲಾಗಿದೆ ಎಂದ ದಿನೇಶ್ ಗುಂಡೂರಾವ್, ಅಂಗಾಂಗ ದಾನ ಮಾಡುವವರಿಗೆ ಆರ್ಥಿಕ ನೆರವು ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ, ಅಂಗಾಂಗ ದಾನ ಮಾಡಿರುವ ವ್ಯಕ್ತಿಯ ಕುಟುಂಬದವರನ್ನು ಗುರುತಿಸುವ ಮೂಲಕ ಅಂಗಾಂಗ ದಾನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಯೋಚಿಸಲಾಗಿದೆ ಎಂದು ಪತ್ರಕರ್ತರೋರ್ವರು ಕೇಳಿದ ಪ್ರಶ್ನೆಯೊಂದಕ್ಕೆ ಆರೋಗ್ಯ ಸಚಿವರು ಉತ್ತರಿಸಿದರು.
ಪ್ರಜಾಪ್ರಭುತ್ವದ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ಬಹಳ ಮುಖ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಭಯ ಮುಕ್ತವಾಗಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ಈ ರೀತಿಯ ವಾತಾವರಣ ನಿರ್ಮಿಸಲು ಸರ್ಕಾರದ ಸಹಕಾರ ಕೂಡ ಅಗತ್ಯ. ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ನಡುವೆ ಪತ್ರಿಕೆಗಳು ಜನರಿಗೆ ನೈಜ ಸುದ್ದಿಗಳನ್ನು ನೀಡುವಲ್ಲಿ ಇಂದಿಗೂ ವಿಶ್ವಾಸ ಉಳಿಸಿಕೊಂಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು.