- ಡಾ. ಕೆ ಸುಧಾಕರ್ ಮನೆಗೆ ಹೋಗಿ ಸಾಂತ್ವನ ಹೇಳಿದಿರಿ, ಬೇರೆ ಯಾರೂ ಕಾಣಲಿಲ್ವಾ?
- ಶಾಸಕರ ಅಭಿಪ್ರಾಯ ಹಂಚಿಕೊಳ್ಳಲು ಕೂಡ ಶಾಸಕಾಂಗ ಸಭೆ ಕರೆಯಲೇ ಇಲ್ಲ
ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಗೆಲ್ಲದವರು ನಮಗೆ ಪಾಠ ಮಾಡುತ್ತಾರೆ. ತಮಿಳುನಾಡಿನಿಂದ ಬಂದು ನಮಗೆ ಮಾರ್ಗದರ್ಶನ ಕೊಡೋಕೆ ಅಣ್ಣಾಮಲೈ ಏನು ದೊಡ್ಡ ಹೀರೋನಾ? ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ಗ್ರಾಮ ಪಂಚಾಯಿತಿ ಗೆಲ್ಲದವರು ನಮಗೆ ಬಂದು ಪಾಠ ಮಾಡ್ತಾರೆ. ಅಣ್ಣಾಮಲೈ ಏನು ದೊಡ್ಡ ಹೀರೋನಾ? ಸೆಲ್ಯೂಟ್ ಹೊಡೆಯುತ್ತಿದ್ದವರಿಂದ ಬಸವರಾಜ ಬೊಮ್ಮಾಯಿ ಅವರು ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆ, ಮುಜುಗರ ಸೃಷ್ಟಿಸಿದ್ದರು. ಇವೆಲ್ಲಾ ನನ್ನ ಮಾತುಗಳಲ್ಲ, ಕಾರ್ಯಕರ್ತರ ಭಾವನೆಗಳು. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಹೋದ ಮೇಲೆ ಅದನ್ನು ಮತಗಳಾಗಿ ಪರಿವರ್ತನೆ ಮಾಡುವ ಮುಖಗಳು ಬೇಕಲ್ವಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬಸವರಾಜ ಬೊಮ್ಮಾಯಿ ಅವರೇ ಡಾ. ಕೆ ಸುಧಾಕರ್ ಸೋತಾಗ ಅವರ ಮನೆಗೆ ಹೋಗಿ ಸಾಂತ್ವನ ಹೇಳಿಬಂದ್ರಿ. ಬೇರೆ ಯಾರೂ ಸೋತ ಅಭ್ಯರ್ಥಿಗಳು ಕಾಣಲಿಲ್ವಾ? ಎರಡು ಖಾತೆ ಕೊಡದಿದ್ದರೆ ಬಿಜೆಪಿಯನ್ನೇ ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದವರ ಮನೆಗೆ ಹೋಗಿದ್ರಿ. ನನಗೆ ಒಂದು ಫೋನ್ ಕಾಲ್ ಆದ್ರೂ ಮಾಡಿದ್ರಾ?” ಎಂದು ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು.
“ಫೆಬ್ರವರಿಯಿಂದಲೇ ಕಾಂಗ್ರೆಸ್‌ನವರು ಗ್ಯಾರಂಟಿಗಳನ್ನು ಕೊಡುತ್ತಾ ಹೋದರು, ನಮ್ಮವರು ಮಲಗಿದ್ದರು. ಬಿಜೆಪಿ ಪ್ರಣಾಳಿಕೆ ಜನರಿಗೆ ತಲುಪಲೇ ಇಲ್ಲ. ಸತಾಯಿಸಿ ಓಡಾಡಿಸಿ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ಕೊಟ್ಟರು. ಶಾಸಕರ ಅಭಿಪ್ರಾಯ ಹಂಚಿಕೊಳ್ಳಲು ಕೂಡ ಶಾಸಕಾಂಗ ಸಭೆ ಕರೆಯಲೇ ಇಲ್ಲ. ಬಸವರಾಜ ಬೊಮ್ಮಾಯಿ ಅವರ ಕೈಕಟ್ಟಿ ಹಾಕಿದ್ದರು” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಸಿಐಡಿ, ಸಿಸಿಬಿ ಕುರಿತ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಿಎಂ ಸಹಮತವಿದೆಯೇ: ಬಿಜೆಪಿ ಪ್ರಶ್ನೆ
“ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಗ್ಗೆ ಗೌರವ ಇದೆ. ಅವರು ಪ್ರವಾಸ ಮಾಡಿದ್ದಾರೆ ನಿಜ. ಆದರೆ, ಅದು ಮತಗಳಾಗಿ ಪರಿವರ್ತನೆ ಆಗಲಿಲ್ಲ. ಸೋಲಿನ ಬಳಿಕ ರಾಜ್ಯಾಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು. ವ್ಯವಸ್ಥೆ ಸರಿಪಡಿಸಿಕೊಳ್ಳಿ, ಅವಲೋಕನ ಮಾಡಿಕೊಳ್ಳಿ. ಕಾರ್ಯಕರ್ತರನ್ನು ಬೆದರಿಸುವುದು ಬಿಡಿ” ಎಂದು ಹೇಳಿದರು.
“ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪರ ಮಾತನಾಡಿದರೆ ಪಕ್ಷ ವಿರೋಧಿ ಚಟುವಟಿಕೆ. ಯಡಿಯೂರಪ್ಪ ವಿರುದ್ಧವಾಗಿ ಮಾತಾಡಿದರೆ ಶಹಬ್ಬಾಸ್‌ಗಿರಿ ಕೊಡ್ತಾರೆ. ಅನಿವಾರ್ಯವಾಗಿ ನಾನು ಈ ರೀತಿ ಮಾತನಾಡ್ತಿದ್ದೇನೆ. ಸೋತವರಿಗೆ ಬಿ ಎಸ್ ಯಡಿಯೂರಪ್ಪ, ಬಿ ವೈ ವಿಜಯೇಂದ್ರ ಕರೆ ಮಾಡಿ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಾರಿಗಾದ್ರೂ ಫೋನ್ ಮಾಡಿದ್ರಾ? ಆತ್ಮಾವಲೋಕನ ಸಭೆ ಎಂದು ಯಾರೋ ಕರೆ ಮಾಡುತ್ತಾರೆ. ಪಕ್ಷದ ಕಚೇರಿಯನ್ನು ಕೆಲವರು ಕಾರ್ಪೊರೇಟ್ ಕಚೇರಿ ಮಾಡಿಕೊಂಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.