- ‘ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಾನು ಸಹ ಪ್ರಬಲ ಆಕಾಂಕ್ಷಿ‘
- ‘ನೈತಿಕ ಹೊಣೆ ಹೊತ್ತು ಕಟೀಲ್ ರಾಜೀನಾಮೆ ನೀಡಬೇಕು‘
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ನಂತರ ಆರಂಭವಾದ ಆಂತರಿಕ ಕಚ್ಚಾಟ ದಿನೇ ದಿನೇ ಹೊಸ ಸ್ವರೂಪ ಪಡೆಯುತ್ತಿದೆ. ಒಬ್ಬೊಬ್ಬ ನಾಯಕರು ಒಬ್ಬೊಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದಾರೆ.
ಚುನಾವಣೆ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಹೇಳಿಕೆ ನೀಡಿದ್ದ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಈಗ ದಿಢೀರ್ ಆಗಿ ಚುನಾವಣೆ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೂ ಗುಡುಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರೇಣುಕಾಚಾರ್ಯ, “ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಾನು ಸಹ ಪ್ರಬಲ ಆಕಾಂಕ್ಷಿ. ಈ ಮಾತನ್ನು ದಾವಣಗೆರೆ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಹಿರಿಯರು ಹಾಗೂ ಜನರ ಒತ್ತಾಯಕ್ಕೆ ಮಣಿದು ಹೇಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಅಲ್ಲದೇ, “ಬಿಜೆಪಿ ರಾಜ್ಯದ ಅಧ್ಯಕ್ಷರಿಗೆ ವಿನಂತಿ ಮಾಡುತ್ತೇನೆ ನಿಮ್ಮ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಮೋದಿಜಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವೆಲ್ಲ ಪಕ್ಷದ ನಾಯಕರು ಕಾರ್ಯಕರ್ತರನ್ನು ಜೋಡಣೆ ಮಾಡಬೇಕು. ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಬಿಜೆಪಿ ಪಕ್ಷವನ್ನು ಹಗಲು ರಾತ್ರಿ ಕಟ್ಟಿದ ಹಿರಿಯರಾದ ಯಡಿಯೂರಪ್ಪ, ದಿವಂಗತ ಅನಂತ ಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪನವರದ್ದು ಬಹುದೊಡ್ಡ ಪಾತ್ರವಿದೆ. ಅಂಥವರನ್ನು ಚುನಾವಣಾ ಸಮಯದಲ್ಲಿ ಕಡೆಗಣಿಸಿದ್ದು. ಬಿಜೆಪಿಗೆ ನಷ್ಟವಾಯಿತು” ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
“ಭಾರತೀಯ ಜನತಾ ಪಕ್ಷ ನನಗೆ ತಾಯಿ ಸಮಾನ. ನನಗೆ ಎಲ್ಲ ಸ್ಥಾನ ಮಾನ ನೀಡಿರುವುದು ಬಿಜೆಪಿ. ಪಕ್ಷಕ್ಕೆ ಹೀನಾಯ ಸೋಲಾದಾಗ ನಾವೆಲ್ಲರೂ ಸತ್ಯಸಂಗತಿಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ಜನತಾ ನ್ಯಾಯಾಲಯದಲ್ಲಿ ಜನರು ತೀರ್ಪು ನೀಡಿದ್ದಾರೆ ಅದಕ್ಕೆ ನಾವು ತಲೆಬಾಗಲೇಬೇಕು. ಅದೇ ಜನಸಾಮಾನ್ಯರು ತಿಳಿಸಿದ ಅಭಿಪ್ರಾಯವನ್ನು ನಾನು ತಿಳಿಸುತ್ತಿದ್ದೇನೆ” ಎಂದಿದ್ದಾರೆ.
ಆರೋಪ ಕೇಳಿಯೂ ಕಟೀಲ್ ಸುಮ್ಮನಿರುವುದೇಕೆ?: ಕಾಂಗ್ರೆಸ್
“ರಾಜ್ಯಾಧ್ಯಕ್ಷರಿಂದಲೇ ಬಿಜೆಪಿಗೆ ಸೋಲಾಗಿದ್ದು ಎಂದು ರೇಣುಕಾಚಾರ್ಯ ಹೇಳಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರು ಈ ಆರೋಪ ಕೇಳಿಯೂ ಸುಮ್ಮನಿರುವುದೇಕೆ? ನನ್ನದೇನೂ ತಪ್ಪಿಲ್ಲ, ಶಾಡೋ ಅಧ್ಯಕ್ಷರಾದ ಜೋಶಿ, ಸಂತೋಷ್ ಅವರೇ ಸೋಲಿಗೆ ಹೊಣೆ ಎಂದು ಘೋಷಿಸಿಬಿಡಲಿ! ಸೋಲಿಗೆ ಸರದಾರರಾದ ಜೋಶಿ, ಸಂತೋಷ್ ಅವರುಗಳ ಹೆಸರೆತ್ತಲು ಬಿಜೆಪಿಗರು ಭಯಪಡುತ್ತಿರುವುದೇಕೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಪ್ರಶ್ನಿಸಿದೆ.