“ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ತಮ್ಮ ವಿರೋಧಿಗಳ ವಿರುದ್ಧ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ” ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಇಂದು ಪಕ್ಷದ ವರಿಷ್ಠ ದೇವೇಗೌಡರೊಂದಿಗೆ ಕರೆಯಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಧಿಕಾರವನ್ನು ದುರುಪಯೋಗಪಡಿಸುತ್ತಿದೆ. ಇವತ್ತು ನಮ್ಮ ಎನ್‌ಡಿಎ ಮಿತ್ರಕೂಟದ ಬಿಜೆಪಿ ಹಾಗೂ ಸಂಘಟನೆಗಳ ಕಾರ್ಯಕರ್ತರ ಹಲವಾರು ವರ್ಷಗಳ ಹಿಂದಿನ ಪ್ರಕರಣಗಳನ್ನು ಕೆದಕುತ್ತಿದೆ. ನಾನಾ ಕಾರಣ ನೀಡಿ ಅಧಿಕಾರವನ್ನು ದುರುಪಯೋಗ ಪಡಿಸುತ್ತಿದೆ” ಎಂದು ಕಿಡಿಕಾರಿದರು.
“ಒಂದು ಕಡೆ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವು ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಹಲವಾರು ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ಇದ್ಯಾವುದರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕರಸೇವಕರ ಬಂಧನ ಮಾಡಿ, ಆ ಮೂಲಕ ಇಂತಹ ವಿಷಯಗಳನ್ನು ಮುನ್ನೆಲೆಗೆ ತಂದು ನೈಜ ವಿಷಯಗಳು ಚರ್ಚೆಯಾಗದಂತೆ ದಾರಿತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಶ್ರೀಕಾಂತ್ ಪೂಜಾರಿ ಪ್ರಕರಣ ದೊಡ್ಡದು ಮಾಡಿದ್ದಾರೆ. ಎಲ್ಲ ಕೇಸ್ ಖುಲಾಸೆ ಆಗಿದೆ ಎಂಬುದನ್ನು ಮಾಧ್ಯಮಗಳೇ ತೋರಿಸಿವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಇ ಡಿ ಅಧಿಕಾರಿಗಳ ಮೇಲೆ ಗುಂಪಿನಿಂದ ದಾಳಿ; ವಾಹನಗಳ ಮೇಲೆ ಕಲ್ಲು ತೂರಾಟ
“ಕರ ಸೇವಕರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಹುಬ್ಬಳ್ಳಿ ಈದ್ಗಾ ಮೈದಾನದ ವಿಚಾರದಲ್ಲಿ ಗಲಾಟೆ ಆದಾಗ ದೇವೇಗೌಡರು ಹೇಗೆ ನಿಭಾಯಿಸಿದರು ಅಂತ ಎಲ್ಲರಿಗೂ ಗೊತ್ತಿದೆ. ಈ ಸರ್ಕಾರ ವಿರೋಧಿಗಳ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಮಾಡುತ್ತಿದೆ” ಎಂದು ಟೀಕಿಸಿದರು.
“ಮರಕಡಿದ ಪ್ರಕರಣದಲ್ಲಿ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಎಂಬುವವರ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಂಸದ ಪ್ರತಾಪ್ ಸಿಂಹರನ್ನು ಕೇಸಿನಲ್ಲಿ ಸಿಕ್ಕಿಸಿಹಾಕಲು ಯತ್ನಿಸಲಾಗಿದೆ. ಇದು ನಾಚಿಕೆಗೇಡು” ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.