ರಾಜ್ಯ ಸರ್ಕಾರಿ ನೌಕರರ ಸಂಘದ 2024 ರಿಂದ 2029ನೇ ಸಾಲಿನವರೆಗೆ ಆಡಳಿತ ಮಂಡಳಿಯ ಚುನಾವಣೆ ಬಾಕಿ ಇದ್ದು, ಪಾರದರ್ಶಕ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಮಾಜಿ ಎಂಎಲ್‌ಸಿ ರಮೇಶ್ ಬಾಬು ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಕೋರಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, “ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಆಡಳಿತದ ಅವಧಿ ಮುಗಿದಿರುವ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಹೊಸ ಚುನಾಯಿತ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವವರೆಗೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕು. ಮತ್ತು ಆಡಳಿತಾಧಿಕಾರಿಗಳ ಮೂಲಕ ಸರ್ಕಾರಿ ನೌಕರರ ಸಂಘದ 2024-29 ನೇ ಸಾಲಿಗೆ ಪಾರದರ್ಶಕವಾದ ಚುನಾವಣೆ ನಡೆಸಲು ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ಸಂಘದ ಬೈಲಾ ಅನ್ವಯ ಈಗಿನ ಆಡಳಿತ ಮಂಡಳಿಯು ನಿಗದಿತ ಸಮಯದ ಒಳಗೆ ಆಡಳಿತ ಮಂಡಳಿಗೆ ಚುನಾವಣೆಯನ್ನು ನಡೆಸಲು ವಿಫಲವಾಗಿರುತ್ತದೆ. ಸಾಂಕೇತಿಕವಾಗಿ ದಿನಪತ್ರಿಕೆಯಲ್ಲಿ ಒಂದು ಜಾಹೀರಾತು ನೀಡಿದ್ದು, ಇಲ್ಲಿಯವರೆಗೆ ಕರಡು ಮತದಾರರ ಪಟ್ಟಿ ಚುನಾವಣಾ ವೇಳಾಪಟ್ಟಿ ಚುನಾವಣಾ ಅಧಿಕಾರಿಯ ನೇಮಕ ಆಗಿರುವುದಿಲ್ಲ” ಎಂದು ತಿಳಿಸಿದ್ದಾರೆ.
“ಇಲ್ಲಿಯವರೆಗೆ ಇಲಾಖೆಯ ಅಧಿಕಾರಿಗಳು ನಿಯಮಾನುಸಾರ ಅವಧಿ ಮುಗಿದಿರುವ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಲು ನಿರ್ದಿಷ್ಟವಾದ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಯಾವುದೇ ಸಂಘ ಸಂಸ್ಥೆಗಳು ತಮ್ಮ ಆಡಳಿತ ಅವಧಿಯನ್ನು ದುರುಪಯೋಗ ಪಡಿಸಿಕೊಂಡು ಚುನಾಯಿತ ಅವಧಿ ಮುಗಿದ ನಂತರವೂ ಪದಾಧಿಕಾರಿಗಳಾಗಿ ಮುಂದುವರಿಯುವುದು ಕಾನೂನುಬಾಹಿರವಾಗಿರುತ್ತದೆ” ಎಂದು ವಿವರಿಸಿದ್ದಾರೆ.
“ತಾಲ್ಲೂಕು ಮಟ್ಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಜಿಲ್ಲಾಮಟ್ಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ರಾಜ್ಯಸಮಿತಿಯ ಸದಸ್ಯರು ಮತ್ತು ಇವರ ಮೂಲಕ ರಾಜ್ಯ ಮಟ್ಟದ ಪದಾಧಿಕಾರಿಗಳು ಚುನಾಯಿತರಾಗಬೇಕಾಗಿರುತ್ತದೆ. ಸಹಕಾರ ಸಂಘಗಳ ಇಲಾಖೆಯ ಬೆಂಗಳೂರು ನಗರ ಜಿಲ್ಲೆಯ 4ನೇ ವಲಯದ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು 21-08-2024 ರಲ್ಲಿ ಉಪನಿಬಂಧಕರ ಕಾರ್ಯಾಲಯದ ಸಹಕಾರ ಅಭಿವೃದ್ಧಿ ಅಧಿಕಾರಿಗೆ ಲಿಖಿತ ಪತ್ರ ನೀಡಿ ಸರ್ಕಾರಿ ನೌಕರರ ಸಂಘದ ವಿರುದ್ಧ ಚುನಾವಣೆ ಸಂಬಂಧ ಬಂದಿರುವ ಅರ್ಜಿಯ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ, ಆಡಳಿತ ಮಂಡಳಿಗೆ ಪಾರದರ್ಶಕವಾಗಿ ಚುನಾವಣೆ ನಡೆಸಲು ಮತ್ತು ಚುನಾವಣೆಯವರೆಗೆ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವ ಸಂಬಂಧ ವರದಿ ನೀಡುವಂತೆ ಸೂಚಿಸಿರುತ್ತಾರೆ” ಎಂದಿದ್ದಾರೆ.
ರಾಜ್ಯದಲ್ಲಿ ಸುಮಾರು ನಾಲ್ಕುವರೆ ಲಕ್ಷ ಸರ್ಕಾರಿ ನೌಕರರು ತಮ್ಮ ಪ್ರಾತಿನಿಧಿಕ ಸಂಸ್ಥೆಯಾದ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಚುನಾಯಿತ ಆಡಳಿತ ಮಂಡಳಿಯನ್ನು ಮತ್ತು ಪಾರದರ್ಶಕವಾದ ಆಡಳಿತವನ್ನು ಬಯಸುತ್ತಿದ್ದಾರೆ. ಈಗಿರುವ ಆಡಳಿತ ಮಂಡಳಿಯು ಉದ್ದೇಶಪೂರಕವಾಗಿ ಕೆಲವು ಸರ್ಕಾರಿ ನೌಕರರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಅರ್ಹ ಮತದಾರರ ಪಟ್ಟಿಯಿಂದ ಹೊರಗಿಡಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳಿರುತ್ತವೆ” ಎಂದು ರಮೇಶ್ ಬಾಬು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.