ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡ ನಂತರ ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಶನಿವಾರದಿಂದ ಮತ್ತೆ ಆರಂಭಿಸುವುದಾಗಿ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಕಲಿ ಸುದ್ದಿ, ಪ್ರಚಾರ ಮತ್ತು ದ್ವೇಷ ಭಾಷಣಗಳ ಹರಡುವಿಕೆಯನ್ನು ತಡೆಯಲು ಮೇ 3ರಂದು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಪರಿಸ್ಥಿತಿ ಸುಧಾರಣೆಯಾಗಿದೆ. ಹೀಗಾಗಿ, ಇಂದಿನಿಂದಲೇ (ಶನಿವಾರ) ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಲಾಗುತ್ತದೆ” ಎಂದು ಹೇಳಿದ್ದಾರೆ.
“ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಅಕ್ರಮ ವಲಸಿಗರ ನುಸುಳುವಿಕೆಯನ್ನು ತಡೆಯಲು ಸರ್ಕಾರವು ಪ್ರಯತ್ನವನ್ನು ಮುಂದುವರೆಸುತ್ತದೆ. ಗಡಿಗೆ ಸಂಪೂರ್ಣ ಬೇಲಿ ಹಾಕುವ ಅಗತ್ಯವಿದೆ. ಮಣಿಪುರದ ಅಂತಾರಾಷ್ಟ್ರೀಯ ಗಡಿಯ 60 ಕಿ.ಮೀ.ಗೆ ಬೇಲಿ ಹಾಕಲು ಕೇಂದ್ರ ಗೃಹ ಸಚಿವಾಲಯ ಕ್ರಮ ಕೈಗೊಂಡಿದೆ” ಎಂದು ಅವರು ಹೇಳಿದ್ದಾರೆ.
“ನಾವು ರಾಜ್ಯದಲ್ಲಿನ ನೈಜ ಸಮಸ್ಯೆಗಳತ್ತ ಗಮನಹರಿಸಬೇಕು. ಅಕ್ರಮ ವಲಸಿಗರ ಒಳಹರಿವು, ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಕಲ್ಯಾಣಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಹಾಗೂ ಬೃಹತ್ ಗಸಗಸೆ ಕೃಷಿಯ ವಿರುದ್ಧ ಹೋರಾಡುವುದು ನಮ್ಮ ಆಧ್ಯತೆ” ಎಂದು ಅವರು ಹೇಳಿದರು.
ಮಣಿಪುರ ಬಹುಸಂಖ್ಯಾತ ಮತ್ತು ಪ್ರಬಲ ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡಬಹುದು ಎಂದು ಅಲ್ಲಿನ ಹೈಕೋರ್ಟ್ ಹೇಳಿದ ಬಳಿಕ ಬುಡಕಟ್ಟು ಕುಕಿ ಸಮುದಾಯ ಪ್ರತಿಭಟನೆ ಆರಂಭಿಸಿತ್ತು. ಆದರೆ, ಪ್ರತಿಭಟನೆ ಸಮಯದಲ್ಲಿ ನಡೆದ ದಾಳಿಯಿಂದಾಗಿ ಹಿಂಸಾಚಾರ ಆರಂಭವಾಗಿತ್ತು. ಇಬ್ಬರು ಕುಕಿ ಸಮುದಾಯದ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಅವರ ಮೇಲಿನ ಸಾಮೂಹಿಕ ಅತ್ಯಾಚಾರದ ದುರ್ಘಟನೆಯು ದೇಶದ ಮನಕಲಕಿತ್ತು. ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ದೇಶಾದ್ಯಂತ ಹೋರಾಟಗಳು ನಡೆದಿದ್ದವು.