- ಮಾರ್ಚ್ 17ಕ್ಕೆ ಚುನಾವಣಾ ರಾಜಕೀಯಕ್ಕೆ ಬಂದು 50 ವರ್ಷ ಪೂರ್ಣ
- ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಬೊಬ್ಬೆ ಹಾಕುವುದು ಸರಿಯಲ್ಲ
2024 ಮಾರ್ಚ್ 17ಕ್ಕೆ ನಾನು ಚುನಾವಣಾ ರಾಜಕೀಯಕ್ಕೆ ಬಂದು 50 ವರ್ಷ ಪೂರ್ಣವಾಗಲಿದೆ. ಅಂದು ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಚಾಮರಾಜನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಇಷ್ಟು ವರ್ಷದ ರಾಜಕಾರಣದ ಬಗ್ಗೆ ನನಗೆ ತೃಪ್ತಿಯಿದೆ. ಇನ್ನು ಮುಂದೆ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಎಲ್ಲವನ್ನೂ ಗಮನಿಸುತ್ತೇನೆ ಅಷ್ಟೆ” ಎಂದು ಹೇಳಿದರು.
“ನಿವೃತ್ತಿ ನಂತರ ಯಾವುದೇ ರಾಜಕೀಯ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುವುದಿಲ್ಲ. ಮುಂದಿನ ಚುನಾವಣೆಗೆ ನಮ್ಮ ಕುಟುಂಬದಿಂದ ಯಾರ ಹೆಸರನ್ನೂ ಪ್ರಸ್ತಾಪ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೋಮು ಗಲಭೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಮೈತ್ರಿ ಕುರಿತು ಬೊಬ್ಬೆ ಹಾಕುವುದು ಸರಿಯಲ್ಲ. ‘ಇಂಡಿಯಾ’ ಎಂದು ಮೈತ್ರಿಯಾಗಿದೆ. ಬಿಜೆಪಿಯನ್ನು ಕಟುವಾಗಿ ವಿರೋಧಿಸುವ 30 ಪಕ್ಷಗಳು ‘ಇಂಡಿಯಾ’ ಹೆಸರಿನಲ್ಲಿ ಒಂದಾಗಬಹುದು. ಇವರಿಬ್ಬರು ಒಂದಾಗಬಾರದಾ? ಜೆಡಿಎಸ್ ಬಿಜೆಪಿ-ಮೈತ್ರಿಯನ್ನು ಜನರು ತೀರ್ಮಾನಿಸುತ್ತಾರೆ” ಎಂದರು.
ಶಿವಮೊಗ್ಗ ಗಲಾಟೆ ಕುರಿತು ಪ್ರತಿಕ್ರಿಯಿಸಿ, “ಆ ಜಿಲ್ಲೆಯಲ್ಲಿ ಗಲಭೆ ಹೊಸದಾಗಿ ಆಗುತ್ತಿದೆಯಾ? ಯಾವ ಸರ್ಕಾರ ಬಂದರೂ ಯಾವುದಾದರೂ ಒಂದು ಕಡೆ ಕೋಮು ಗಲಭೆ ನಡೆಯುವುದು ಸಾಮಾನ್ಯ. ಅದೇ ರೀತಿ ಶಿವಮೊಗ್ಗದಲ್ಲಿ ಅಹಿತಕರ ಘಟನೆ ಆಗಿದೆ” ಎಂದರು.