ತಕರಾರು ಅರ್ಜಿ ಶೀಘ್ರ ವಿಲೇವಾರಿ ಮಾಡದ ತಹಶೀಲ್ದಾರರ ವಿರುದ್ಧ ಕಠಿಣ ಕ್ರಮ: ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ

Date:

Advertisements
  • ಜನವರಿ ವೇಳೆಗೆ 90 ದಿನಕ್ಕಿಂತ ಹಳೆಯ ಪ್ರಕರಣಗಳು ಬಾಕಿ ಇರಬಾರದು
  • ಬಗರ್ ಹುಕುಂ ರೈತರಿಗೆ ಸಿಹಿ ಸುದ್ದಿ ನೀಡಿದ ಕಂದಾಯ ಸಚಿವ

ತಹಶೀಲ್ದಾರ್ ನ್ಯಾಯಾಲಯದಲ್ಲಿರುವ ತಕರಾರು ಅರ್ಜಿಗಳನ್ನು ಜನವರಿ ಒಳಗಾಗಿ ಸಂಪೂರ್ಣವಾಗಿ ನ್ಯಾಯಯುತ ವಿಲೇವಾರಿ ಮಾಡಬೇಕು. ಅಧಿಕಾರಿಗಳು ಈ ಸೂಚನೆಯನ್ನು ಪಾಲಿಸದಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದ್ದಾರೆ.

ಕಂದಾಯ ಇಲಾಖೆಯ ನಾಲ್ಕೂ ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನು ವಿಕಾಸಸೌಧದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಈ ವೇಳೆ ಕಳೆದ ನಾಲ್ಕು ತಿಂಗಳಿನಿಂದಲೂ ಹಲವು ಸೂಚನೆಗಳನ್ನು ನೀಡಿದ್ದಾಗ್ಯೂ ಉತ್ತಮ ನಿರ್ವಹಣೆ ತೋರದ ತಹಶೀಲ್ದಾರ್‌ಗಳಿಗೆ ಸಚಿವರು ಎಚ್ಚರಿಕೆ ನೀಡಿದರು.

‘ಜನಸಾಮಾನ್ಯರು ಅವರ ದೈನಂದಿನ ಕೆಲಸ ಬಿಟ್ಟು ದಿನಂಪ್ರತಿ ನಿಮ್ಮ ಕಚೇರಿಗಳಿಗೆ ಅಲೆಯುತ್ತಿರಬೇಕಾ?’ ಎಂದು ಕಿಡಿಕಾರಿದ ಸಚಿವರು, ‘ಯಾವುದೇ ಪ್ರಕರಣ 90 ದಿನಗಳಲ್ಲಿ ಇತ್ಯರ್ಥಗೊಳ್ಳಬೇಕು ಎಂದು ಕಾನೂನು ಇದ್ದರೂ, ಐದು ವರ್ಷದಷ್ಟು ಹಳೆಯ ಪ್ರಕರಣಗಳೂ ಸಹ ಈವರೆಗೆ ವಿಲೇವಾರಿ ಆಗದೆ ಉಳಿಯಲು ಏನು ಕಾರಣ?’ ಖಡಕ್ ಆಗಿ ಪ್ರಶ್ನಿಸಿದರು.

Advertisements

kbg 1

‘ಜನವರಿಯ ಒಳಗೆ 90 ದಿನಕ್ಕೂ ಹಳೆಯ ಯಾವ ಪ್ರಕರಣಗಳೂ ಉಳಿಯಬಾರದು. ಒಂದು ವೇಳೆ ಅಧಿಕಾರಿಗಳು ಈ ಸೂಚನೆಯನ್ನು ಮೀರಿದಲ್ಲಿ ನೋಟಿಸ್ ಜಾರಿಗೊಳಿಸಲಾಗುವುದು ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಕಳೆದ ನಾಲ್ಕು ತಿಂಗಳಲ್ಲಿ 30,000 ಪ್ರಕರಣ ವಿಲೇವಾರಿ
ಸಭೆಯಲ್ಲಿ ಸಮರ್ಥ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಕೃಷ್ಣ ಬೈರೇಗೌಡ, ‘ನಮ್ಮ ಸರ್ಕಾರ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯದಲ್ಲೇ ಒಟ್ಟು 59,339 ಪ್ರಕರಣಗಳು ಬಾಕಿ ಇದ್ದವು. ಆದರೆ, ಕಳೆದ ನಾಲ್ಕು ತಿಂಗಳ ಅವಧಿಯಲ್ಲೇ ಈ ಪ್ರಕರಣಗಳ ಸಂಖ್ಯೆಯನ್ನು 30 ಸಾವಿರಕ್ಕೆ ಇಳಿಸಲಾಗಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಈ ಎಲ್ಲ ಪ್ರಕರಣಗಳನ್ನೂ ಇತ್ಯರ್ಥಗೊಳಿಸಿ ಶೇ.100 ರಷ್ಟು ಸಾಧನೆ ಮಾಡಬೇಕಿದೆ’ ಎಂದು ಕಾಲಮಿತಿ ನೀಡಿದರು.

ಬರ ಪರಿಹಾರದ ಹಣವನ್ನು ಸರಿಯಾದ ಸಮಯಕ್ಕೆ ಪಾರದರ್ಶಕವಾಗಿ ರೈತರಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಬರ ಪರಿಹಾರದ ಹಣ ನೀಡಲು ರಾಜ್ಯದ ಶೇ.95ರಷ್ಟು ರೈತರ ಹೆಸರಲ್ಲಿ ಐಡಿ ಸೃಷ್ಟಿಸಲಾಗಿದೆ. ಆದರೆ, ಅವರ ಜಮೀನಿನ ಸಂಪೂರ್ಣ ವಿಸ್ತೀರ್ಣದ ಮಾಹಿತಿಯನ್ನು ನಮೂದಿಸಲಾಗಿಲ್ಲ. ಇದರಿಂದ ಅರ್ಹ ರೈತರಿಗೆ ಸಂಪೂರ್ಣ ಪರಿಹಾರ ಸಿಗುವುದಿಲ್ಲ. ಹೀಗಾಗಿ ಅಧಿಕಾರಿಗಳು ಅಭಿಯಾನ ಕೈಗೊಳ್ಳಬೇಕು. ಎಲ್ಲ ರೈತರ ಭೂಮಿಯ ವಿಸ್ತೀರ್ಣವನ್ನು ಸಂಪೂರ್ಣವಾಗಿ FIRST ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ತಿಳಿಸಿದರು.

ಬಗರ್ ಹುಕುಂ ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವರು

ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಮುಂದಿನ 15 ದಿನಗಳೊಳಗಾಗಿ 100 ತಾಲೂಕುಗಳಲ್ಲಿ ಬಗರ್ ಹುಕುಂ ಸಮಿತಿ ರಚನೆ ಮಾಡಲಾಗುವುದು ಎಂದೂ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

byregowda 1

‘ಅಕ್ರಮವಾಗಿ ಸಾಗುವಳಿ ನಡೆಸುತ್ತಿರುವ ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡುವ ಸಲುವಾಗಿ ಬಗರ್ ಹುಕುಂ ಸಮಿತಿಯನ್ನು ಮುಂದಿನ 15 ದಿನಗಳ ಒಳಗಾಗಿ 100 ತಾಲೂಕುಗಳಲ್ಲಿ ರಚಿಸಲಾಗುವುದು. ಅಧಿಕಾರಿಗಳು ಮುಂದಿನ 6 ತಿಂಗಳಲ್ಲಿ ಯಾವ ಅರ್ಜಿಯೂ ಬಾಕಿ ಉಳಿಸದಂತೆ ಸಂಪೂರ್ಣ ವಿಲೇವಾರಿ ಮಾಡಬೇಕು. ಅಲ್ಲದೆ, ಅರ್ಹ ಫಲಾನುಭವಿಗಳಿಗೆ ಶೀಘ್ರ ಸಾಗುವಳಿ ಚೀಟಿ ನೀಡಬೇಕು’ ಎಂದು ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಗ್ರಾಮಗಳ ಘೋಷಣೆಗೂ ಕಾಲಮಿತಿ ನಿಗದಿಪಡಿಸಲಾಯಿತು. ಕಳೆದ ಐದು ವರ್ಷಗಳ ಅವಧಿಯಲ್ಲಿ 1,300 ಕಡೆಗಳಲ್ಲಿ ಮಾತ್ರ ಕಂದಾಯ ಗ್ರಾಮ ಘೋಷಿಸಲಾಗಿದೆ. ಉಳಿದ ತಾಂಡಾ-ಗೊಲ್ಲರಹಟ್ಟಿಗಳು ಹಲವು ಯೋಜನೆಗಳಿಂದ ವಂಚಿತವಾಗುತ್ತಿವೆ. ಹೀಗಾಗಿ ಜನವರಿ ಒಳಗಡೆ 1,800 ಕಡೆ ಕಂದಾಯ ಗ್ರಾಮವಾಗಿ ಘೋಷಿಸಿ ಹಕ್ಕು ಪತ್ರ ನೀಡಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಕಂಡುಬಂದ 24 ಗಂಟೆಗಳ ಒಳಗಾಗಿ ಆ ಭಾಗಕ್ಕೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಿ ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಆದಿತ್ಯ ಬಿಸ್ವಾಸ್ ಹಾಗೂ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X