ಟಿಎಂಸಿ ತನ್ನ ರಾಜಕೀಯ ಸಂಘರ್ಷದಲ್ಲಿ ಬಿಜೆಪಿಗೆ ಅವಕಾಶ ನೀಡಬಾರದೆಂದು ರಾಮ ನವಮಿಯನ್ನು ಆಕ್ರಮಣಕಾರಿಯಾಗಿ ಬೆಂಬಲಿಸುತ್ತಿದೆ. ಬಂಗಾಳದ ಇತಿಹಾಸದಲ್ಲಿ ರಾಮ ನವಮಿಗಾಗಿ ಸಾರ್ವತ್ರಿಕ ರಜೆ ಘೋಷಿಸಿದೆ. ಬಿಜೆಪಿಯ ಕೋಮು ರಾಜಕಾರಣಕ್ಕೆ ಟಿಎಂಸಿ ಕೂಡ ಅದನ್ನೇ ಮುಂದೆ ಮಾಡುತ್ತಿದೆ.
ಪಶ್ಚಿಮ ಬಂಗಾಳವನ್ನು ಒಂದು ಭೂತ ಕಾಡುತ್ತಿದೆ – ಅದು ಕಮ್ಯುನಿಸಂ ಅಥವಾ ಕ್ರಾಂತಿಯಲ್ಲ, ಬದಲಾಗಿ ವಿನಾಶಕಾರಿ ಕೋಮುವಾದ. ಒಂದು ಕಾಲದಲ್ಲಿ ಮಾರ್ಕ್ಸ್‌ವಾದಿಗಳ ಭದ್ರಕೋಟೆಯಾಗಿದ್ದ ರಾಜ್ಯವು, ಜಾತ್ಯತೀತ ಮತ್ತು ಸೈದ್ಧಾಂತಿಕ ನೆಲೆಯಲ್ಲಿ ನಡೆಯುತ್ತಿದ್ದ ರಾಜಕೀಯಕ್ಕೆ ಹೆಸರುವಾಸಿಯಾಗಿತ್ತು. ಆದರೆ, ಈಗ ಧಾರ್ಮಿಕ ಧ್ರುವೀಕರಣದ ಕಡೆಗೆ ಹೊರಳುತ್ತಿದೆ. ಕೋಮು ರಾಜಕಾರಣದ ನೆಲೆಯಾಗಿ ಬದಲಾಗುತ್ತಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ಬಹಿರಂಗ ಯುದ್ಧದಲ್ಲಿ ಧಾರ್ಮಿಕ ಗುರುತು ಮತ ಬ್ಯಾಂಕ್‌ಗಳ ಕ್ರೋಡೀಕರಣಕ್ಕೆ ಅಸ್ತ್ರವಾಗಿ ಬಳಕೆಯಾಗುತ್ತಿದೆ. 2026ರ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಸಮಯದಲ್ಲಿ ಬಂಗಾಳದ ರಾಜಕೀಯ ನಿರೂಪಣೆಯನ್ನು ಗಂಭೀರವಾಗಿ ಬದಲಾಯಿಸುತ್ತಿದೆ.
ಬಂಗಾಳದಲ್ಲಿ ವರ್ಗ ಹೋರಾಟ ಅಥವಾ ಅಭಿವೃದ್ಧಿ ನೀತಿ ಕುರಿತು ಚರ್ಚೆಗಳು ಪ್ರಾಬಲ್ಯ ಸಾಧಿಸುತ್ತಿದ್ದ ದಿನಗಳು ಕಳೆದುಹೋಗಿವೆ. ಈಗ, ಹಿಂದು ಬಹುಸಂಖ್ಯಾತತೆ ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣವು ಬಂಗಾಳದ ರಾಜಕೀಯ ಚರ್ಚೆಯ ಕೇಂದ್ರಗಳಾಗಿವೆ. ರಾಜಕೀಯವನ್ನು ಮುನ್ನಡೆಸುವ ಅವಳಿ ಎಂಜಿನ್‌ಗಳಾಗಿ ಹೊರಹೊಮ್ಮಿವೆ. ವಿಧಾನಸಭೆಯಲ್ಲಿನ ಚರ್ಚೆಗಳಿಂದ ಬೀದಿಯ ಮೂಲೆಗಳವರೆಗೆ ಧಾರ್ಮಿಕ ಗುರುತಿನ ವಾಕ್ಸಮರಗಳು ವ್ಯಾಪಿಸಿವೆ. ಶಿಕ್ಷಣ, ಆರೋಗ್ಯ, ರಕ್ಷಣೆ ಹಾಗೂ ಉದ್ಯೋಗದ ಕುರಿತಾದ ಚರ್ಚೆಗಳನ್ನು ಮೂಲೆಗುಂಪು ಮಾಡಿವೆ.
ಬಂಗಾಳ ಚುನಾವಣೆಗೆ ಈಗಾಗಲೇ ಸ್ಕ್ರಿಪ್ಟ್ ಸಿದ್ದವಾಗಿದೆ. ಹರಿಯಾಣ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಚುನಾವಣಾ ಯಶಸ್ಸು ಕಂಡಿರುವ ಬಿಜೆಪಿ, ಮುಸ್ಲಿಂ ನಿಂದನೆ ಮತ್ತು ಕೋಮುದ್ವೇಷವೇ ತಮ್ಮ ಪ್ರಬಲ ಅಸ್ತ್ರವೆಂದು ಪರಿಗಣಿಸಿದೆ. ಈ ಬಾರಿ ಬಂಗಾಳದಲ್ಲಿ ಮುಸ್ಲಿಮರ ವಿರುದ್ದದ ದ್ವೇಷ ಭಾಷಣವನ್ನು ದ್ವಿಗುಣಗೊಳಿಸಲು ಆರಂಭಿಸಿದೆ.
ಕಳೆದೊಂದು ತಿಂಗಳನಿಂದ ಬಂಗಾಳದಲ್ಲಿ ಬಿಜೆಪಿಯ ಆಕ್ರಮಣಕಾರಿ ಹಿಂದು ಬಲವರ್ಧನೆಯ ತಂತ್ರಗಳು ಹೆಚ್ಚು ಪ್ರವರ್ಧಮಾನಕ್ಕೆ ಬಂದಿವೆ. ಈ ಹಿಂದೆ, ಇಫ್ತಾರ್‌ಗಳಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಈಗ ಕೋಮುದ್ವೇಷದ ಮಾತನಾಡುತ್ತಿದ್ದಾರೆ. ‘ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಎಂಸಿಯ ಮುಸ್ಲಿಂ ಶಾಸಕರನ್ನು ಬೀದಿಗೆ ಎಳೆಯುತ್ತೇವೆ. ವಿಧಾನಸಭೆಯಿಂದ ಹೊರಹಾಕುತ್ತೇವೆ’ ಎಂದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ಹುಮಾಯೂನ್ ಕಬೀರ್ ಅವರು ಇತ್ತೀಚೆಗೆ, ‘ನನಗೆ ನನ್ನ ಸಮುದಾಯ ಮೊದಲ ಸ್ಥಾನದಲ್ಲಿದೆ. ಪಕ್ಷವು ಎರಡನೇ ಸ್ಥಾನದಲ್ಲಿದೆ. ನನ್ನ ಸಮುದಾಯದ ಮೇಲೆ ದಾಳಿ ನಡೆದರೆ, ನಾನು ಅದಕ್ಕೆ ಉತ್ತರಿಸದೆ ಬಿಡುವುದಿಲ್ಲ’ ಎಂದಿದ್ದಾರೆ.
ಅವರ ಈ ಹೇಳಿಕೆಯು ಬಂಗಾಳದ ರಾಜಕೀಯದಲ್ಲಿ ಕೋಮು ವಿಭಜನೆಯ ಅಸ್ತ್ರವಾಗಿ ಆಳವಾಗಿ ಬೇರೂರುತ್ತಿದೆ. ಜೊತೆಗೆ ಬಿಜೆಪಿ ಕೋಮು ವಿಭಜನೆಗೆ ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ಕೇಸರಿ ಸಂಕೇತದ ಮೂಲಕ ಹಿಂದು ಮತದಾರರನ್ನು ಆಕರ್ಷಿಸಲು ಯತ್ನಿಸುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ. ಬಿಜೆಪಿಯ ಬಹುಸಂಖ್ಯಾತ ಹೆಸರಿನ ಆಕ್ರಮಣದ ವಿರುದ್ಧ ಅಲ್ಪಸಂಖ್ಯಾತರ ರಕ್ಷಕನಾಗಿ ತನ್ನನ್ನು ತಾನು ಇರಿಸಿಕೊಳ್ಳುವಲ್ಲಿ ಟಿಎಂಸಿ ಗೊಂದಲ ಮತ್ತು ದ್ವಂದ್ವವನ್ನು ಅನುಭವಿಸುತ್ತಿದೆ. ಕೋಮು ರಾಜಕೀಯವನ್ನು ಹೇಗೆ ಎದುರಿಸಬೇಕು ಎಂಬ ವಿಚಾರದಲ್ಲಿ ಗೊಂದಲಕ್ಕೆ ಬಿದ್ದಿದೆ.
ಈ ವರದಿ ಓದಿದ್ದೀರಾ?: ಬಿಜೆಪಿ ಕೋಮುದ್ವೇಷ ಮತ್ತು ವಕ್ಫ್ ಆಸ್ತಿ ವಿವಾದ
”ಪಶ್ಚಿಮ ಬಂಗಾಳದ ರಾಜಕೀಯವು ಒಂದು ಕಾಲದಲ್ಲಿ ಧರ್ಮದಿಂದಲ್ಲ, ಸಿದ್ಧಾಂತದಿಂದ ವಿಭಜಿಸಲ್ಪಟ್ಟಿತ್ತು. ಇಂದು ವಿಧಾನಸಭೆಯಲ್ಲಿ ಧಾರ್ಮಿಕ ಗುರುತು ಮತ್ತು ಕೋಮು ವಾಕ್ಚಾತುರ್ಯ ಮುನ್ನೆಲೆಗೆ ಬಂದಿದೆ. ಬಿಜೆಪಿ ಮತ್ತು ಟಿಎಂಸಿ ಎರಡೂ ಸದನದ ಹೊರಗೆ ಉದ್ವಿಗ್ನತೆ ಸೃಷ್ಟಿಸುತ್ತಿವೆ. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿವೆ. ರಾಜ್ಯದ ರಾಜಕೀಯವು ಈ ಅನಾಗರಿಕತೆಗೆ ಇಳಿಯುವುದು ಆತಂಕಕಾರಿ” ಎಂದು ಹಿರಿಯ ಪತ್ರಕರ್ತೆ ಮತ್ತು ರಾಜಕೀಯ ವಿಶ್ಲೇಷಕಿ ಸುದೀಪ್ತ ಸೇನ್‌ಗುಪ್ತಾ ಹೇಳುತ್ತಾರೆ.
”ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಧಾನಸಭೆಯೊಳಗೆ ಉದ್ದೇಶಪೂರ್ವಕ ವಿಭಜನೆಯ ಪ್ರಯತ್ನಗಳು ಆರಂಭವಾಗಿವೆ. ಶಿಕ್ಷಣ, ಆರೋಗ್ಯ ರಕ್ಷಣೆ, ಉದ್ಯೋಗ, ಕೃಷಿ, ಕೈಗಾರಿಕೆ ಹಾಗೂ ಒಟ್ಟಾರೆ ಅಭಿವೃದ್ಧಿಯಂತಹ ನಿರ್ಣಾಯಕ ವಿಷಯಗಳನ್ನು ಚರ್ಚಿಸುವ ಬದಲು, ಇಡೀ ಚರ್ಚೆಯು ಸಂಪೂರ್ಣವಾಗಿ ಕೋಮು ವಿಭಜನೆಯತ್ತ ತಿರುಗಿದೆ. ಮೋಹನ್ ಭಾಗವತ್ ಅವರು ಕೋಲ್ಕತ್ತಾಗೆ ಭೇಟಿ ನೀಡಿದ್ದ ಸಮಯದಲ್ಲಿಯೇ ಈ ಕಾರ್ಯತಂತ್ರದ ನೀಲನಕ್ಷೆಯನ್ನು ತಯಾರಿಸಿದ್ದರು. ಈಗ ಅದನ್ನು ವಿಧಾನಸಭೆಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ” ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂಡಿ ಸಲೀಂ ಆರೋಪಿಸಿದ್ದಾರೆ.
ಹಿಂದು ಮತದಾರರು ಮತ್ತು ಮತ ಬ್ಯಾಂಕ್‌ಅನ್ನು ಕ್ರೋಡೀಕರಿಸುವ ಉದ್ದೇಶದಿಂದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬಂಗಾಳದಲ್ಲಿ 10 ದಿನಗಳ ಪ್ರವಾಸ ಕೈಗೊಂಡಿದ್ದರು. ಅವರ ಪ್ರವಾಸದ ನಂತರ ಧಾರ್ಮಿಕ ದ್ವೇಷ ಭಾಷಣಗಳು ಹೆಚ್ಚಾದವು. ಕೆಲವು ವರ್ಷಗಳ ಹಿಂದಿನವರೆಗೂ ಬಂಗಾಳದ ಕೆಲವು ಪ್ರದೇಶಗಳಲ್ಲಿ ಆಚರಿಸಲ್ಪಡುತ್ತಿದ್ದ ರಾಮ ನವಮಿ ಹಬ್ಬವು ಈಗ ಕೋಮು ಸಂಘರ್ಷದ ದಾಳವಾಗಿ ಇಡೀ ರಾಜ್ಯದುದ್ದಕ್ಕೂ ವಿಸ್ತರಿಸಿದೆ. ಧಾರ್ಮಿಕ ಬಲದ ಪ್ರದರ್ಶನವಾಗಿ ಮಾರ್ಪಟ್ಟಿದೆ. ಮುಂದಿನ ವಾರ ರಾಜ್ಯಾದ್ಯಂತ 20,000ಕ್ಕೂ ಹೆಚ್ಚು ರಾಮ ನವಮಿ ಮೆರವಣಿಗೆಗಳು ನಡೆಯಲಿದ್ದು, ಒಂದು ಕೋಟಿ ಹಿಂದುಗಳು ಭಾಗವಹಿಸಲಿದ್ದಾರೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಅಲ್ಲದೆ, ತಮ್ಮ ಕ್ಷೇತ್ರ ನಂದಿಗ್ರಾಮದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿಯೂ ಘೋಷಿಸಿದ್ದಾರೆ.
ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಕೋಮುದ್ವೇಷ ಜಾಹೀರಾತು ನೀಡಿ ವಿಕೃತಿ ಮೆರೆದ ಬಿಜೆಪಿ
ಟಿಎಂಸಿ ತನ್ನ ರಾಜಕೀಯ ಸಂಘರ್ಷದಲ್ಲಿ ಬಿಜೆಪಿಗೆ ಅವಕಾಶ ನೀಡಬಾರದೆಂದು ರಾಮ ನವಮಿಯನ್ನು ಆಕ್ರಮಣಕಾರಿಯಾಗಿ ಬೆಂಬಲಿಸುತ್ತಿದೆ. ಕಳೆದ ವರ್ಷ, ಟಿಎಂಸಿ ಸರ್ಕಾರವು ರಾಮ ನವಮಿಗೆ ಸಾರ್ವಜನಿಕ ರಜಾದಿನವನ್ನು ಘೋಷಿಸಿತ್ತು. ಇದು ಬಂಗಾಳದ ಇತಿಹಾಸದಲ್ಲಿ ರಾಮ ನವಮಿಗಾಗಿ ಸಾರ್ವತ್ರಿಕ ರಜೆ ಘೋಷಿಸಿದೆ. 2023ರ ಲೋಕಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ಟಿಎಂಸಿಯಿಂದ ಸ್ಪರ್ಧಿಸಿದ್ದ ಬಿರ್ಭುಮ್‌ನ ಶತಾಬ್ದಿ ರಾಯ್, ಜಾದವ್‌ಪುರದ ಸಯೋನಿ ಘೋಷ್ ಮತ್ತು ಘಟಲ್‌ನ ದೀಪಕ್ ಅಧಿಕಾರಿ (ದೇಬ್) ಅವರಂತಹ ಹಿರಿಯ-ಪ್ರಭಾವಿ ಅಭ್ಯರ್ಥಿಗಳು ಪಕ್ಷದ ಧ್ವಜಗಳ ಜೊತೆಗೆ ಕೇಸರಿ ಶಾಲುಗಳನ್ನು ಹಾಕಿಕೊಂಡು ಪ್ರಚಾರ ರ್‍ಯಾಲಿಗಳನ್ನು ನಡೆಸಿದ್ದರು.
“ಪ್ರಸಿದ್ಧ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗಿಯಾಗುವುದು, ಬೆಂಬಲಿಸುವುದನ್ನು ಮಾಡುತ್ತಲೇ ಸಾಂಸ್ಕೃತಿಕವಾಗಿ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಟಿಎಂಸಿ ಪ್ರಾರಂಭಿಸಿತು. ಆದರೆ, ರಾಜಕೀಯದಲ್ಲಿ ಧಾರ್ಮಿಕ ಗುರುತನ್ನು ಬಿಜೆಪಿ ಪ್ರಬಲವಾಗಿ ತಂದಿದ್ದರಿಂದ ಟಿಎಂಸಿಗೆ ಸವಾಲು ಎದುರಾಯಿತು. ಬಿಜೆಪಿ ಪ್ರವರ್ಧಮಾನಕ್ಕೆ ಬಂದಂತೆ, ಮುಸ್ಲಿಮರು ಟಿಎಂಸಿಯನ್ನು ತಮ್ಮ ಹೊಸ ರಕ್ಷಕನನ್ನಾಗಿ ಕಂಡುಕೊಂಡರು. ಇದು ಎಡ ಮತ್ತು ಕಾಂಗ್ರೆಸ್‌ನಂತಹ ಸಾಂಪ್ರದಾಯಿಕ ‘ಜಾತ್ಯತೀತ’ ಬಣಗಳಿಗೆ ಮತ್ತಷ್ಟು ಪೆಟ್ಟುಕೊಟ್ಟಿತು. ಈ ಎರಡು ಪಕ್ಷಗಳ ಕುಸಿತವು ಬಿಜೆಪಿಯ ಕೋಮು ರಾಜಕೀಯಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಯಿತು” ಎಂದು ವಿವರಿಸುತ್ತಾರೆ ಮಾನವಶಾಸ್ತ್ರಜ್ಞ ಮತ್ತು ಲೇಖಕ ಸುಮನ್ ನಾಥ್.
ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ದಿಘಾ ಪಟ್ಟಣದಲ್ಲಿ ಒಡಿಶಾದ ಜಗನ್ನಾಥ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲು ರಾಜ್ಯ ಬೊಕ್ಕಸದಿಂದ 250 ಕೋಟಿ ರೂ. ಅನುದಾನ ನೀಡಿದೆ. ಆ ಪ್ರತಿಕೃತಿಯು ಹಿಂದುಗಳ ಶುಭದಿನವೆಂದು ಪರಿಗಣಿಸಲಾಗಿರುವ ‘ಅಕ್ಷಯ ತೃತೀಯ’ದಂದು (ಏಪ್ರಿಲ್ 30) ಉದ್ಘಾಟನೆಗೊಳ್ಳಲಿದೆ. ಅಯೋಧ್ಯೆ ರಾಮ ಮಂದಿರದ ಪವಿತ್ರೀಕರಣವನ್ನು ಪ್ರತಿಬಿಂಬಿಸುವಂತೆ, ಏಪ್ರಿಲ್ 29 ರಂದು ಉದ್ಘಾಟನೆಗೆ ಮುಂಚಿತವಾಗಿ ಪ್ರಾಣ ಪ್ರತಿಷ್ಠಾ ಸಮಾರಂಭವೂ ನಡೆಯಲಿದೆ.
ಈ ವರದಿ ಓದಿದ್ದೀರಾ?: ತಿರುಪತಿಯಲ್ಲಿ ಕೆಲಸ – ಹಿಂದುಗಳಿಗಷ್ಟೇ ಅವಕಾಶ, ಇತರರಿಗೆ ವಿಆರ್‌ಎಸ್; ಕೋಮುದ್ವೇಷಕ್ಕೆ ಬಲಿಯಾಯ್ತಾ ಟಿಟಿಡಿ?
ಬಂಗಾಳದ ಪ್ರಭಾವಿ ಮುಸ್ಲಿಂ ಪಾದ್ರಿ, ಫರ್ಫುರಾ ಷರೀಫ್‌ನ ಪಿರ್ಜಾದಾ ತೋಹಾ ಸಿದ್ದಿಕಿ ಅವರು, ದಿಘಾದಲ್ಲಿ ಜಗನ್ನಾಥ ದೇವಾಲಯ ನಿರ್ಮಾಣದ ಜೊತೆಗೆ ಮಸೀದಿಯನ್ನೂ ನಿರ್ಮಿಸಬೇಕು. ಧಾರ್ಮಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಅದಕ್ಕೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ, ಇತ್ತೀಚೆಗೆ ದಿಘಾದ ದೇವಾಲಯಕ್ಕೆ ಭೇಟಿ ನೀಡಿದ್ದ ಮಮತಾ ಬ್ಯಾನರ್ಜಿ, ಫರ್ಫುರಾ ಷರೀಫ್‌ನಲ್ಲಿ ನಡೆದ ಇಫ್ತಾರ್ ಕೂಟದಲ್ಲಿಯೂ ಭಾಗವಹಿಸಿದ್ದರು. 2016ರ ಚುನಾವಣೆಯ ಸಮಯದಲ್ಲಿ ಇಫ್ತಾರ್‌ನಲ್ಲಿ ಭಾಗವಹಿಸಿದ್ದ ಮಮತಾ ಮತ್ತೆ ಇಫ್ತಾರ್‌ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು.
“ಬಿಜೆಪಿ ಧರ್ಮದ ಆಧಾರದ ಮೇಲೆ ಜನರನ್ನು ಬಹಿರಂಗವಾಗಿ ವಿಭಜಿಸುತ್ತಿದೆ. ಆದರೆ, ಮಮತಾ ಅವರು ಅಲ್ಪಸಂಖ್ಯಾತ ಸಮುದಾಯವನ್ನು ಗೆಲ್ಲಲು ಫರ್ಫುರಾ ಷರೀಫ್‌ಗೆ ಭೇಟಿ ನೀಡುತ್ತಿದ್ದಾರೆ. ಅವರು ಕಾರ್ಯತಂತ್ರದ ಆಟವನ್ನು ಆಡುತ್ತಿದ್ದಾರೆ. ಅದರಲ್ಲಿ, ಅಲ್ಪಸಂಖ್ಯಾತರ ಮತಗಳನ್ನು ಪಡೆಯುವುದು ಮಾತ್ರವಲ್ಲ, ಹಿಂದು ಮತಗಳಲ್ಲಿ ಎಷ್ಟು ವಿಭಜಿಸಬಹುದು ಎಂಬುದನ್ನು ನೋಡಲು ಅವರು ಯತ್ನಿಸುತ್ತಿದ್ದಾರೆ” ಎಂದು ಮಾಜಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.
ಫರ್ಫುರಾ ಷರೀಫ್‌ನ ಧಾರ್ಮಿಕ ನಾಯಕರನ್ನು ಅನುಸರಿಸುವ ಬಂಗಾಳಿ ಮಾತನಾಡುವ ಮುಸ್ಲಿಮರು ಹೂಗ್ಲಿ, ಹೌರಾ, ಮುರ್ಷಿದಾಬಾದ್, ಮಾಲ್ಡಾ ಮತ್ತು ದಕ್ಷಿಣ 24 ಪರಗಣ ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಹೀಗಾಗಿಯೇ, 2021ರಲ್ಲಿ, ಫರ್ಫುರಾ ಷರೀಫ್‌ನ ಮುಖ್ಯಸ್ಥರಾದ ಅಬ್ಬಾಸ್ ಮತ್ತು ನೌಶಾದ್ ಸಿದ್ದಿಕಿ ಅವರು ಎಡ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಟಿಎಂಸಿ ವಿರುದ್ಧ ‘ಭಾರತೀಯ ಜಾತ್ಯತೀತ ರಂಗ’ (ಐಎಸ್‌ಎಫ್) ಕಟ್ಟಿದ್ದರು. ಆ ಚುನಾವಣೆಯಲ್ಲಿ ಐಎಸ್‌ಎಫ್ ಸೀಮಿತ ಯಶಸ್ಸು ಕಂಡರೂ, ಮುಸ್ಲಿಂ ಮತದಾರರ ಮೇಲೆ ಸಿದ್ದಿಕಿ ಪ್ರಭಾವ ಬೀರಿದರು. ಸಮುದಾಯದ ಮೇಲೆ ತಮ್ಮ ಹಿಡಿತ ಇರುವುದನ್ನು ತೋರಿಸಿದರು.
ರಾಜ್ಯದ ಒಟ್ಟು ಮತದಾರರಲ್ಲಿ ಮುಸ್ಲಿಂ ಮತಗಳು 25%ಗಿಂತ ಹೆಚ್ಚಿವೆ. ರಾಜ್ಯದ 294 ವಿಧಾನಸಭಾ ಸ್ಥಾನಗಳಲ್ಲಿ ಸುಮಾರು 125-130 ಕ್ಷೇತ್ರಗಳು ಗಮನಾರ್ಹ ಮುಸ್ಲಿಂ ಪ್ರಾಬಲ್ಯವನ್ನು ಹೊಂದಿವೆ. ಈ ಕ್ಷೇತ್ರಗಳ ಪೈಕಿ ಬಹುತೇಕ ಸ್ಥಾನಗಳಲ್ಲಿ ಟಿಎಂಸಿ ಸಂಪೂರ್ಣ ಪ್ರಾಬಲ್ಯ ಉಳಿಸಿಕೊಂಡಿದೆ. ಆದರೂ, ಇತ್ತೀಚೆಗೆ ಪ್ರಾಬಲ್ಯ ಕ್ಷೀಣಿಸುತ್ತಿರುವ ಲಕ್ಷಣಗಳೂ ಕಾಣಿಸುತ್ತಿವೆ. ಮುಂಬರುವ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು ಎಲ್ಲ 294 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಇದು ಟಿಎಂಸಿಗೆ ಹೊಸ ಬೆದರಿಕೆಯಾಗಿ ಎದುರಾಗಿದೆ. ಎಐಎಂಐಎಂ ಸ್ಪರ್ಧೆಯು ಮುಸ್ಲಿಂ ಮತಗಳನ್ನು ವಿಭಜಿಸುವ ಮತ್ತು ಬಿಜೆಪಿ ವಿರುದ್ಧ ಟಿಎಂಸಿಯ ಹೋರಾಟಕ್ಕೆ ಹೊಡೆತ ಕೊಡುವ ಅಪಾಯವನ್ನು ಉಂಟುಮಾಡುತ್ತದೆ.
2026ರ ಚುನಾವಣೆಯಲ್ಲಿ ವಿಭಜನೆಯ ರಾಜಕೀಯವು ಬಂಗಾಳವನ್ನು ಕೋಮುವಾದದ ತುದಿಗೆ ತಂದು ನಿಲ್ಲಿಸಿದರೂ ಸಹ, ಕೋಮು ರಾಜಕಾರಣಕ್ಕೆ ವಿರುದ್ಧವಾಗಿ ಜನರ ವಿಚಾರಗಳು ಸೇರಿದಂತೆ ಹಲವು ಅಗತ್ಯ ವಿಷಯಗಳನ್ನು ಮುನ್ನೆಲೆಗೆ ತರುವುದು ಟಿಎಂಸಿಗೆ ಜೀವ ಕೊಡಬಹುದು. ಜೊತೆಗೆ, ಕಾಂಗ್ರೆಸ್-ಸಿಪಿಐಎಂ ಕೂಡ ನೆಲೆ ಕಂಡುಕೊಳ್ಳಲು ಸಾಧ್ಯವಾಗಬಹುದು. ಎಲ್ಲವೂ ಕೋಮು ರಾಜಕಾರಣವನ್ನು ಹೇಗೆ ಎದುರಿಸಬಹುದು ಎಂಬ ತಂತ್ರದ ಮೇಲೆ ಅವಲಂಬಿತವಾಗಿವೆ.