ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಅನುಕರಣೆ ಮಾಡಿದ್ದಕ್ಕಾಗಿ ಆರ್‌ಜೆಡಿ ಎಂಎಲ್‌ಸಿ ಸುನೀಲ್ ಸಿಂಗ್ ಅವರನ್ನು ಶುಕ್ರವಾರ ಸದನದಿಂದ ಉಚ್ಚಾಟಿಸಲಾಗಿದೆ. ಕೌನ್ಸಿಲ್‌ನ ನೈತಿಕ ಸಮಿತಿಯ ಶಿಫಾರಸಿನ ಆಧಾರದ ಧ್ವನಿ ಮತದ ಮೂಲಕ ಈ ಉಚ್ಚಾಟನೆಯನ್ನು ಅಂಗೀಕರಿಸಲಾಗಿದೆ.
ಫೆಬ್ರವರಿ 13ರಂದು ಕೌನ್ಸಿಲ್ ಕಲಾಪದಲ್ಲಿ ಸುನೀಲ್ ಸಿಂಗ್ ಅವರು ತಮ್ಮ ಭಾಷಣದಲ್ಲಿ ನಿತೀಶ್ ಕುಮಾರ್ ಅವರ ನಡವಳಿಕೆಯನ್ನು ಅನುಕರಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ “ನಾನು ಎಂದಿಗೂ ಮುಖ್ಯಮಂತ್ರಿಯನ್ನು ಅನುಕರಣೆ ಮಾಡಿಲ್ಲ” ಎಂದು ಸಿಂಗ್ ಹೇಳಿದ್ದಾರೆ.
ಇನ್ನು ಸದನದಿಂದ ಸುನೀಲ್ ಸಿಂಗ್ ಉಚ್ಚಾಟನೆಯನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ರಾಬ್ರಿ ದೇವಿ, “ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ಅಧ್ಯಾಯ” ಎಂದು ಕರೆದಿದ್ದಾರೆ. ಇನ್ನು ರಾಬ್ರಿ ದೇವಿ ಸೇರಿ ಆರ್‌ಜೆಡಿ ಶಾಸಕರು ಕಪ್ಪು ಪಟ್ಟಿ ಧರಿಸಿ ಸದನಕ್ಕೆ ಆಗಮಿಸಿದರು.
ತನ್ನ ಉಚ್ಚಾಟನೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸುನೀಲ್ ಸಿಂಗ್, “ನಾನು ಎಂದಿಗೂ ಸಿಎಂ ನಿತೀಶ್ ಅವರ ಅನುಕರಣೆ ಮಾಡಿಲ್ಲ. ಒಂದು ವೇಳೆ ಅನುಕರಣೆ ಮಾಡಿದರೂ ಅದು ಎರಡೂ ಸದನಗಳ ಸದಸ್ಯತ್ವವನ್ನು ಕಸಿದುಕೊಳ್ಳುವ ಅಪರಾಧವಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ಬಿಜೆಪಿ ಮಿತ್ರರಾದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ತಮ್ಮ ರಾಜ್ಯಕ್ಕೆ ಗಳಿಸಿದ್ದೇನು?
“ನಿತೀಶ್ ಕುಮಾರ್ ಅವರು ನನ್ನಂತಹವರಿಗೆ ಪರಿಷತ್ತಿನಲ್ಲಿ ನಾನು ನಿಮ್ಮನ್ನು ನಾಶಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಅವರು ಮಹಿಳೆಯರಿಗೆ ಅಗೌರವ ತೋರುವ ಮುಖ್ಯಮಂತ್ರಿಯಾಗಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಹಲವಾರು ಭ್ರಷ್ಟಾಚಾರ ಪ್ರಕರಣಗಳು ನಡೆದಿದೆ” ಎಂದು ಆರೋಪಿಸಿದರು.
ಇನ್ನು ಮತ್ತೋರ್ವ ಆರ್‌ಜೆಡಿ ಎಂಎಲ್‌ಸಿ ಮೊಹಮ್ಮದ್ ಖಾರಿ ಸೊಹೈಬ್ ಕೂಡ ಸಿಎಂ ನಿತೀಶ್ ಅನುಕರಿಸುವ ಪ್ರಯತ್ನಿಸಿದ್ದು ಬಳಿಕ ಕ್ಷಮೆಯಾಚಿಸಿದ್ದಾರೆ. ಅದಾದ ಬಳಿಕ ಸೊಹೈಬ್ ಅವರನ್ನು ವಿಧಾನ ಪರಿಷತ್ತಿನಿಂದ ಎರಡು ದಿನಗಳ ಅಮಾನತುಗೊಳಿಸಲಾಗಿದೆ. ಆದರೆ ಸುನೀಲ್ ಸಿಂಗ್ ಕ್ಷಮೆ ಕೇಳಲು ನಿರಾಕರಿಸಿದ್ದರು.
ರಜಪೂತ ನಾಯಕ ಸುನೀಲ್ ಸಿಂಗ್ ಎರಡು ದಶಕಗಳಿಂದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ನಿಕಟ ಸಹವರ್ತಿಯಾಗಿದ್ದಾರೆ. ಸಿಂಗ್ ಬಿಹಾರ ರಾಜ್ಯ ಸಹಕಾರ ಮಾರುಕಟ್ಟೆ ಒಕ್ಕೂಟದ ಮುಖ್ಯಸ್ಥರೂ ಆಗಿದ್ದಾರೆ.
ಮುಂಗಾರು ಅಧಿವೇಶನದ ಅಂತಿಮ ದಿನದಂದು ಈ ನಿರ್ಧಾರಕ್ಕೆ ಬಂದಿದ್ದು, ಸದನ ಮತ್ತೆ ಸೇರಿದಾಗ ಸಿಂಗ್ ಅವರ ಅಮಾನತು ಜಾರಿಗೆ ಬರಲಿದೆ.
VIDEO | “Democracy has been murdered today. Our Leader of Opposition Rabri Devi ji said that I should be given a time to speak, however, they clearly denied. This has never happened before in the history,” says RJD MLC Sunil Singh who was expelled from Bihar Legislative Council… pic.twitter.com/xQKM3ctQZK
— Press Trust of India (@PTI_News) July 26, 2024