ವಕ್ಫ್ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಈ ಬೆನ್ನಲ್ಲೇ ವಿಪಕ್ಷಗಳು, ಹಲವು ಸಂಘಟನೆಗಳು, ಪ್ರಗತಿಪರರು ಈ ವಿವಾದಾತ್ಮಕ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಕದ ತಟ್ಟುತ್ತಿದ್ದಾರೆ. ಇದೀಗ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ರಾಜ್ಯಸಭಾ ಸಂಸದ ಮನೋಜ್ ಝಾ ಮತ್ತು ನಾಯಕ ಫಯಾಜ್ ಅಹ್ಮದ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಮಸೂದೆಯಲ್ಲಿರುವ ನಿಬಂಧನೆಗಳನ್ನು ಪ್ರಶ್ನಿಸಿ ಆರ್‌ಜೆಡಿ ನಾಯಕರು ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದಾರೆ. ಈ ತಿದ್ದುಪಡಿ ಮಸೂದೆಯು ವಕ್ಫ್ ಆಸ್ತಿಗಳ ನಿರ್ವಹಣೆಗೆ ಗಮನಾರ್ಹ ಪರಿಣಾಮಗಳನ್ನು ಬೀರಬಹುದು ಎಂದು ಆರ್‌ಜೆಡಿ ನಾಯಕರು ವಾದಿಸಿದ್ದಾರೆ.
ಇದನ್ನು ಓದಿದ್ದೀರಾ? ವಕ್ಫ್ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಎಎಪಿ ಶಾಸಕ ಅಮಾನತುಲ್ಲಾ
ಸಂಸತ್ತಿನ ಎರಡೂ ಸದನಗಳಲ್ಲಿ ಎರಡು ದಿನಗಳ ಚರ್ಚೆಯ ಬಳಿಕ ವಕ್ಫ್ ತಿದ್ದುಪಡಿ ಮಸೂದೆ 2025 ಅನ್ನು ಈ ವಾರ ಅಂಗೀಕರಿಸಲಾಯಿತು. ರಾಜ್ಯಸಭೆಯಲ್ಲಿ 128 ಮಂದಿ ಮಸೂದೆ ಪರ, 95 ಮಸೂದೆ ವಿರುದ್ಧ ಮತ ಹಾಕಿದ್ದಾರೆ. ಲೋಕಸಭೆಯಲ್ಲಿ ಮಸೂದೆಯನ್ನು 288 ಸದಸ್ಯರು ಪರವಾಗಿ ಮತ್ತು 232 ಸದಸ್ಯರು ವಿರೋಧಿಸಿದರು.
ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿರುವ ವಕ್ಫ್ ಮಸೂದೆ ಅಂಗೀಕಾರದ ವಿರುದ್ಧ ಪ್ರತಿಭಟನೆಗಳೂ ನಡೆಯುತ್ತಿದೆ. ಕಾಂಗ್ರೆಸ್, ಎಎಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಈಗಾಗಲೇ ವಕ್ಫ್ ಮಸೂದೆ ಪ್ರಶ್ನಿಸಿ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತನ್ನ ಅಖಿಲ ಭಾರತ ಮಹಾ ಅಧಿವೇಶನದಲ್ಲಿ ವಕ್ಫ್ ಮಸೂದೆ ವಿರುದ್ಧ ನಿರ್ಣಯ ಕೈಗೊಂಡಿರುವ ಸಿಪಿಐಎಂ ಕೂಡಾ ಕೋರ್ಟ್ ಕದ ತಟ್ಟುವ ಸಾಧ್ಯತೆಯಿದೆ.
