ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಮಿತ್ರಪಕ್ಷ ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ವಕ್ತಾರ ರೋಹಿತ್ ಜಾಖರ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
“ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಅವರ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಿರುವುದು ಮಹಿಳಾ ಕುಸ್ತಿಪಟುಗಳಿಗೆ ಮಾಡಿದ ಅವಮಾನವಾಗಿದೆ. ನನಗೆ ದೇಶದ ಗೌರವ ಎಂದಿಗೂ ಕೂಡಾ ಮೊದಲ ಸ್ಥಾನದಲ್ಲಿರುತ್ತದೆ” ಎಂದು ರೋಹಿತ್ ಜಾಖರ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬ್ರಿಜ್ ಭೂಷಣ್‌ಗೆ ತಪ್ಪಿದ ಲೋಕಸಭಾ ಟಿಕೆಟ್: ಪುತ್ರನಿಗೆ ಮಣೆ ಹಾಕಿದ ಬಿಜೆಪಿ
“ನಾನು ಬೇರೆ ಯಾವುದೇ ರಾಜಕೀಯ ಪಕ್ಷಗಳಿಗೆ ಸೇರ್ಪಡೆಯಾಗುವುದಿಲ್ಲ. ಆದರೆ ಸಾಮಾಜಿಕ ಸಮಸ್ಯೆಗಳ ವಿರುದ್ಧ ನನ್ನ ಹೋರಾಟವನ್ನು ನಾನು ಮುಂದುವರಿಸುತ್ತೇನೆ” ಎಂದೂ ಜಾಖರ್ ತಿಳಿಸಿದ್ದಾರೆ.
ಆರ್‌ಎಲ್‌ಡಿಯ ಪ್ರಮುಖ ನಾಯಕರುಗಳಲ್ಲಿ ಜಾಕರ್ ಕೂಡಾ ಒಬ್ಬರು. ಹಾಗೆಯೇ ರಾಷ್ಟ್ರೀಯ ಜಟ್ ಫೆಡರೇಶನ್‌ನ ರಾಜ್ಯ ಅಧ್ಯಕ್ಷರೂ ಆಗಿದ್ದಾರೆ. ಒಂದು ದಶಕಗಳ ಕಾಲದಿಂದ ಆರ್‌ಎಲ್‌ಡಿಯಲ್ಲಿರುವ ಜಾಕರ್ ರೈತರ ಆಂದೋಲನದ ಜೊತೆಯೂ ಕೈಜೋಡಿಸಿದ್ದಾರೆ.
ಬಿಜೆಪಿ ಗುರುವಾರ ಕರಣ್ ಭೂಷಣ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಕೈಸರ್‌ಗಂಜ್ ಕ್ಷೇತ್ರದ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಅವರ ಪುತ್ರನಿಗೆ ಬಿಜೆಪಿ ಮಣೆ ಹಾಕಿದೆ.
ಇದನ್ನು ಓದಿದ್ದೀರಾ? ಕುಸ್ತಿ ಫೆಡರೇಷನ್‌ನ ನೂತನ ಅಧ್ಯಕ್ಷನಾಗಿ ಬ್ರಿಜ್ ಭೂಷಣ್ ಆಪ್ತ: ಕುಸ್ತಿ ತ್ಯಜಿಸುವುದಾಗಿ ಘೋಷಿಸಿದ ಸಾಕ್ಷಿ ಮಲಿಕ್
ಕುಸ್ತಿ ಫೆಡರೇಶನ್ ಅಧ್ಯಕ್ಷ ಸ್ಥಾನದಲ್ಲಿದ್ದಾಗ ಬ್ರಿಜ್ ಭೂಷಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕುಸ್ತಿಪಟುಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಆದರೆ ಬ್ರಿಜ್ ಭೂಷಣ್ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಇನ್ನು ಈ ಹಿಂದೆ ಬಿಜೆಪಿಯೊಂದಿಗೆ ಆರ್‌ಎಲ್‌ಡಿ ಮೈತ್ರಿ ಮಾಡಿಕೊಂಡ ಬಳಿಕ ಆರ್‌ಎಲ್‌ಡಿ ರಾಷ್ಟ್ರೀಯ ಉಪಾಧ್ಯಕ್ಷ ಶಾಹಿದ್ ಸಿದ್ಧಿಕಿ ರಾಜೀನಾಮೆ ನೀಡಿದ್ದರು.