ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಿಂದಿನ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದು, ಆರ್‌ಎಸ್‌ಎಸ್ ಹಿನ್ನೆಲೆಯ ನಿತಿನ್ ಗಡ್ಕರಿ, ಈ ಅವಧಿಯಲ್ಲಿಯೂ ಸಚಿವರಾಗಲಿದ್ದು, ಮತ್ತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯನ್ನೇ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಮೋದಿ ಆಡಳಿತದ ಕಳೆದ ಎರಡೂ ಅವಧಿಗಳಲ್ಲೂ ಗಡ್ಕರಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿದ್ದರು. ಅವರ ಅವಧಿಯಲ್ಲಿ ದೇಶದ ನಾನಾ ಭಾಗಗಳಿಗೆ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಹೀಗಾಗಿ, ಮತ್ತೆ ಅವರಿಗೆ ಈ ಖಾತೆ ದೊರೆಯುವ ಸಾಧ್ಯತೆಗಳಿವೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕೇವಲ 240 ಸ್ಥಾನಗಳಲ್ಲಿ ಗೆಲುವು ಕಂಡಿದ್ದು, ಬಹುಮತ (272)ಕ್ಕೆ ಬೇಕಾದ ಸ್ಥಾನಗಳ ಕೊರತೆಯಿಂದ ಎನ್‌ಡಿಎ ಮೈತ್ರಿಪಕ್ಷಗಳ ಮರ್ಜಿಯಲ್ಲಿ ಸರ್ಕಾರ ರಚನೆ ಮಾಡುತ್ತಿದೆ. ಹೀಗಾಗಿ, ಮೈತ್ರಿ ಧರ್ಮ ಪಾಲನೆ ಮಾಡಬೇಕಾದ ಅನಿವಾರ್ಯತೆ ಬಿಜೆಪಿಗಿದೆ.
ಬಿಜೆಪಿಗೆ ಈ ಬಾರಿ ಸಚಿವ ಸ್ಥಾನ ಹಂಚಿಕೆ ಜವಾಬ್ದಾರಿ ಸವಾಲಾಗಿದೆ. ಎನ್ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿದ್ದಾರೆ. ಅವರು ನಾನಾ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಅದಾಗ್ಯೂ, ಪ್ರಮುಖ ಖಾತೆಗಳಾದ ಗೃಹ, ಹಣಕಾಸು, ರಕ್ಷಣಾ ಹಾಗೂ ವಿದೇಶಾಂಗ ವ್ಯವಹಾರ ಖಾತೆಗಳನ್ನು ಬಿಜೆಪಿ ಮೈತ್ರಿಪಕ್ಷಗಳಿಗೆ ಬಿಟ್ಟುಕೊಡಲು ಸಿದ್ದವಿಲ್ಲ.
ರಸ್ತೆಗಳ ವಿಸ್ತರಣೆಯ ವೇಗ ಮುಂದುವರಿಯಲು ರಸ್ತೆ ಸಾರಿಗೆ ಖಾತೆಯನ್ನು ಕೂಡ ಮಿತ್ರಪಕ್ಷಗಳಿಗೆ ಬಿಟ್ಟುಕೊಡಲು ಬಿಜೆಪಿ ಹಿಂದೇಟು ಹಾಕುತ್ತಿದೆ. ಹೀಗಾಗಿ, ಆ ಖಾತೆ ಗಡ್ಕರಿಯಲ್ಲೇ ಉಳಿಯುವ ಸಾಧ್ಯತೆಗಳಿವೆ.
2023ರ ಅಂತ್ಯದಲ್ಲಿ ಸರ್ಕಾರದ ಪರಿಶೀಲನೆಯ ಪ್ರಕಾರ, ಕಳೆದ 10 ವರ್ಷಗಳಲ್ಲಿ ದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಜಾಲವು ಶೇಕಡಾ 60ರಷ್ಟು ಹೆಚ್ಚಾಗಿದೆ. 2014ರಲ್ಲಿದ್ದ 91,287 ಕಿ.ಮೀಗಳಿಂದ 2023ರಲ್ಲಿ 1,46,145 ಕಿಮೀಗೆ ವಿಸ್ತರಣೆಯಾಗಿದೆ. ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಗಳ ಉದ್ದವು 2.5 ಪಟ್ಟು ಹೆಚ್ಚಾಗಿದೆ ಮತ್ತು ಏಕ ಪಥ ರಸ್ತೆಗಳ ಉದ್ದವು ಕಡಿಮೆಯಾಗಿದೆ.
ಗಡ್ಕರಿ ಅವರು ನಾಗ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ 1.37 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ಗೆಲುವಿನ ಅಂತರ ಈ ಬಾರಿ 78,397ಕ್ಕೆ ಕುಸಿದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪರಪ್ಪನ ಅಗ್ರಹಾರದಲ್ಲಿ ನೆಟ್‌ವರ್ಕ್ ಜಾಮಿಂಗ್ ಸಮಸ್ಯೆ; ಪ್ರತಿಭಟನೆ
ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಿತಿನ್ ಗಡ್ಕರಿ, “ನಾಗ್ಪುರದ ಜನರಿಗೆ, ಪಕ್ಷದ ಕಾರ್ಯಕರ್ತರು ಮತ್ತು ಸ್ನೇಹಿತರಿಗೆ ಧನ್ಯವಾದ. ನಾಗ್‌ಪುರವನ್ನು ದೇಶದಲ್ಲೇ ಅತ್ಯಂತ ಸುಂದರ, ಸ್ವಚ್ಛ ಹಾಗೂ ಮಾಲಿನ್ಯ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ” ಹೇಳಿದರು.
ಎನ್‌ಡಿಎ ಸಂಸದೀಯ ಪಕ್ಷವು ನರೇಂದ್ರ ಮೋದಿಯನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿದ ನಂತರ, ನಿತಿನ್ ಗಡ್ಕರಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವವು ಕಳೆದ 10 ವರ್ಷಗಳನ್ನು ಅಭೂತಪೂರ್ವ ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣದ ಯುಗವಾಗಿ ಪರಿವರ್ತಿಸಿದೆ. ಹೊಸ ಶಕ್ತಿ ಮತ್ತು ವೇಗದೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ಇದಕ್ಕೆ ಎನ್‌ಡಿಎ ಬದ್ಧವಾಗಿದೆ” ಎಂದಿದ್ದಾರೆ.