- ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬುದು ತಪ್ಪು
- ಬೇಕಾದರೆ ತಮಗೆ ಬೇಕಾದ ಅಧಿಕಾರಿಗಳನ್ನು ಶಾಮನೂರು ಹಾಕಿಕೊಳ್ಳಲಿ
ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ತಪ್ಪಿನಿಂದ ಕೂಡಿದೆ ಎಂದು ಸಿದ್ದರಾಮಯ್ಯ ಬಣದ ಶಾಸಕ ಬಸವರಾಜ ರಾಯರೆಡ್ಡಿ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಾತಿ ಆಧಾರದಲ್ಲಿ ಅಧಿಕಾರಿಗಳ ನೇಮಕಾತಿ ನಡೆದರೆ ಅನರ್ಹರು ಮೇಲೆ ಬಂದು ಕೂರುತ್ತಾರೆ. ಜಾತಿ ಆಧಾರದಲ್ಲಿ ಪೋಸ್ಟಿಂಗ್ ಕೊಡಲು ಆಗಲ್ಲ. ಆದರೆ ಮಂತ್ರಿ ಮಾಡುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಕೊಡಲಾಗುತ್ತದೆ” ಎಂದರು.
ಲಿಂಗಾಯತ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ರಾಯರೆಡ್ಡಿ, ಸಿದ್ದರಾಮಯ್ಯ ಅವರು ಲಿಂಗಾಯತ ವಿರೋಧಿ ಅಲ್ಲ. ಮೂವರು ಡಿಸಿಗಳು, ಏಳು ಎಸ್ಪಿಗಳು, ನಾಲ್ಕು ಸಿಇಒ, 13 ಉಪಕುಲಪತಿಗಳು, ಏಳು ಮಂತ್ರಿಗಳು ಲಿಂಗಾಯತರಿದ್ದಾರೆ” ಎಂದು ತಿಳಿಸಿದರು.
“ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಅಲ್ಲ, ಸಿದ್ದರಾಮಯ್ಯ ಬಡವರ ಪರ, ಶೋಷಣೆಗೆ ಒಳಪಟ್ಟ ಸಮುದಾಯಗಳ ಪರ ಇದ್ದಾರೆ. ಲಿಂಗಾಯತರು ಶೋಷಿತರ ಮನೆಗೆ ಹೋಗಲ್ಲ ನಮ್ಮ ಕಡೆ ಈ ವ್ಯವಸ್ಥೆ ಇದೆ” ಎಂದರು.
ಬೇಕಾದ ಅಧಿಕಾರಿಗಳನ್ನು ಹಾಕಿಕೊಳ್ಳಿ
“ಶಾಮನೂರು ಅವರು ತಪ್ಪು ಮಾಹಿತಿ ಇಟ್ಟುಕೊಂಡು ಮಾತನಾಡಬಾರದು. ಬೇಕಾದರೆ ತಮಗೆ ಬೇಕಾದ ಅಧಿಕಾರಿಗಳನ್ನು ಶಾಮನೂರು ಅವರು ಹಾಕಿಕೊಳ್ಳಲಿ. ಮಾಹಿತಿ ಕೊರತೆಯಿಂದ ಮಾತನಾಡುವುದು ತಪ್ಪು” ಎಂದು ಹೇಳಿದರು.
“ಅಧಿಕಾರಿಗಳ ಬಗ್ಗೆ ಜಾತಿ ಆಧಾರದಲ್ಲಿ ಮಾತನಾಡುವುದೇ ತಪ್ಪು. ಸಾಕಷ್ಟು ಮುಖ್ಯ ಇಂಜಿನಿಯರ್ ಪೋಸ್ಟ್‌ನಲ್ಲಿ ಲಿಂಗಾಯತರಿದ್ದಾರೆ. ಹೀಗೆ ಆದರೆ ನಾಳೆ ಒಕ್ಕಲಿಗರು, ಕುರುಬರು ಮಾತನಾಡುತ್ತಾರೆ. ಹೀಗಾದರೆ ಆಡಳಿತ ನಡೆಸುವುದು ಹೇಗೆ? ಶಾಮನೂರು ಹೇಳಿಕೆ ಪರಿಣಾಮ ಆಡಳಿತದ ಮೇಲೆ ಬೀರುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಜಾತಿಗಣತಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ: ಸಿಎಂ ಸಿದ್ದರಾಮಯ್ಯ
“ದಾವಣಗೆರೆಯಲ್ಲಿ ಜಿಪಂ ಸಿಇಒ ಲಿಂಗಾಯತ ಸಮುದಾಯದವರೇ ಆಗಿದ್ದಾರೆ. ಶಾಮನೂರು ಜಾತಿ ವಿಚಾರ ಮಾತನಾಡಿದ್ದು ತಪ್ಪು. ಅವರದ್ದು ಡ್ಯುಯೆಲ್ ರೋಲ್, ನಾನಂತೂ ಎಂದೂ ಜಾತಿ ಆಧಾರದ ಮೇಲೆ ಮಂತ್ರಿ ಮಾಡಿ ಅಂತ ಕೇಳಲ್ಲ. ಅನರ್ಹರೆಲ್ಲ ನಾಳೆ ಜಾತಿ ಆಧರಿಸಿ ಬಂದು ಕೂರುತ್ತಾರೆ. ಯಾವುದೇ ಸಮುದಾಯದವರೂ ಹೀಗೆ ಮಾತನಾಡಬಾರದು ಅಂತ ಬಯಸುತ್ತೇನೆ” ಎಂದು ಹೇಳಿದರು.
“ನಾನು ಸಿದ್ದರಾಮಯ್ಯ ಪರ ವಕಾಲತ್ತು ವಹಿಸುತ್ತಿಲ್ಲ. ನನ್ನನ್ನ ಸಚಿವರನ್ನಾಗಿ ಮಾಡಿ, ಏನಾದರೂ ಮಾಡಿ ಅಂತಾ ಭಿಕ್ಷೆ ಬೇಡಲ್ಲ. ನಾನು ಭಿಕ್ಷೆ ಬೇಡಲ್ಲ ಜಾತಿ ಆಧಾರದ ಮೇಲೆ ಅಧಿಕಾರಿಗಳ ವರ್ಗಾವಣೆ ಬೇಡ, ಆಡಳಿತ ಕುಸಿಯುತ್ತದೆ” ಎಂದರು.
ಮಹತ್ವ ಕಳೆದುಕೊಂಡ ಡಿಸಿಎಂ ಪೋಸ್ಟ್
ಡಿಸಿಎಂ ಸ್ಥಾನ ಬಗ್ಗೆ ಪ್ರತಿಕ್ರಿಯಿಸಿದ ರಾಯರೆಡ್ಡಿ, “ಡಿಸಿಎಂ ಸ್ಥಾನ ಅದರ ಮಹತ್ವವನ್ನು ಕಳೆದುಕೊಂಡಿದೆ. ಐದು, ಆರು ಜನ ಡಿಸಿಎಂ ಮಾಡಿದರೆ ಹೇಗೆ? ಆಡಳಿತ ದೃಷ್ಟಿಯಿಂದ ಪ್ರಯೋಜನ ಇಲ್ಲ, ರಾಜಕೀಯ ದೃಷ್ಟಿಯಿಂದ ಬೇಕಾದರೆ ಮಾಡಿ” ಎಂದರು.