ರಾಜ್ಯಾದ್ಯಂತ ಮನೆಗಳ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಟೆಂಡರ್‌ನಲ್ಲಿ ಸುಮಾರು 15,568 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಕೆಇಆರ್‌ಸಿ ನಿಯಮದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯವಲ್ಲ. ಆದರೂ, ಎಲ್ಲ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಇಂಧನ ಇಲಾಖೆ ಮುಂದಾಗಿದೆ. ಬೆಸ್ಕಾಂ ಮತ್ತು ರಾಜ್ಯದ ಇತರ ಎಸ್ಕಾಂಗಳು ಕೆಇಆರ್‌ಸಿ ನಿಯಮಗಳನ್ನು ಉಲ್ಲಂಘಿಸುತ್ತಿವೆ” ಎಂದು ಹೇಳಿದ್ದಾರೆ.
“ಟೆಂಡರ್ ಕರೆದಾಗ ಕೆಟಿಪಿಪಿ ಕಾಯ್ದೆಯಡಿ ಬಿಡ್ ಸಾಮರ್ಥ್ಯವನ್ನು ತಿಳಿಸಿಲ್ಲ. ಬಿಡ್ ಸಾಮರ್ಥ್ಯವು 6,800 ಕೋಟಿ ರೂ. ಇರಬೇಕಿತ್ತು. ವ್ಯವಹಾರವು 1,920 ಕೋಟಿ ರೂ. ಇರಬೇಕಿತ್ತು. ಆದರೆ, ಬರೀ 107 ಕೋಟಿ ರೂ. ಎಂದು ಉಲ್ಲೇಖಿಸಲಾಗಿದೆ. ಆ ಬಳಿಕ, ಅಂದಾಜು ವೆಚ್ಚ 571 ಕೋಟಿ ರೂ. ಎಂದು ತಿದ್ದಲಾಗಿದೆ. ಟೆಂಟರ್‌ನ ಒಟ್ಟು ಮೊತ್ತ ತಿಳಿಸಿದೆ, ಬಿಡ್ ಕರೆಯಲಾಗಿದೆ. ಬಿಡ್ಡಿಂಗ್ ಸಾಮರ್ಥ್ಯವನ್ನು ಉಲ್ಲೇಖಿಸದೇ ಇರುವುದೇ ಆರಂಭದ ಹಗರಣ” ಎಂದು ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: ಮಲ್ಪೆ ಮೀನು ಪೇಟೆ ಪ್ರಕರಣ | ಕರಾವಳಿಯ (ಅ)ನ್ಯಾಯ ನಿರ್ಣಯದ ನಮೂನೆ
“ಯಾವುದೇ ಗುತ್ತಿಗೆಯನ್ನು ಕಪ್ಪುಪಟ್ಟಿಗೆ ಸೇರಿದ ಕಂಪನಿಗೆ ಕೊಡುವಂತಿಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ಕಪ್ಪುಪಟ್ಟಿಗೆ ಸೇರಿರುವ ಬಿಸಿಐಟಿಎಸ್ ಕಂಪನಿಯನ್ನು ಇಲ್ಲಿ ಬಿಡ್ ಮಾಡಲು ಪರಿಗಣಿಸಲಾಗಿದೆ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ಬೃಹತ್ ಪ್ರಮಾಣದ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಬಿಡ್ ಮಾಡುವ ಕಂಪನಿಗೆ 1 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸಿದ ಅನುಭವ ಇರಬೇಕು. ಆದರೆ, 10 ಲಕ್ಷ ಸಾಮಾನ್ಯ ಮೀಟರ್ ಅಳವಡಿಕೆ ಮಾಡಿರುವುದನ್ನೇ ಮಾನದಂಡ ಮಾಡಿಕೊಳ್ಳಲಾಗಿದೆ” ಎಂದು ದೂರಿದ್ದಾರೆ.
“ಬಿಡ್ ಕರೆಯುವಲ್ಲಿ ಕೆಟಿಪಿಪಿ ಕಾಯ್ದೆ ಮತ್ತು ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಕಡೆಗಣಿಸಲಾಗಿದೆ. ಸ್ಮಾರ್ಟ್ ಮೀಟರ್ ತಯಾರಿಸದ, ಅಳವಡಿಸದ, ಕೇವಲ ಡಿಜಿಟಲ್ ಮೀಟರ್ ಅಳವಡಿಸಿರುವ ಕಂಪನಿಯನ್ನು ಬಿಡ್‌ಗೆ ಪರಿಗಣಿಸಲಾಗಿದೆ. ಪ್ರಿ-ಬಿಡ್‍ನಲ್ಲಿ ರಾಜಶ್ರೀಯನ್ನು ಯಾಕೆ ಪರಿಣಗಿಣಿಸಿಲ್ಲ. ಅರ್ಹರನ್ನು ಹೊರಗಿಟ್ಟು, ಫೋನ್ ತಯಾರಕರನ್ನು ಆಯ್ಕೆ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
“ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ಹಾಗೂ ಪಕ್ಕದ ಕೇರಳದಲ್ಲಿ ಕಡಿಮೆ ಮೊತ್ತದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ. ಈ ರಾಜ್ಯಗಳಲ್ಲಿ ಸರಿಸುಮಾರು ಪ್ರತಿ ಮೀಟರ್‌ಗೆ 7,740 ರೂ. ವೆಚ್ಚ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ಪ್ರತಿ ಮೀಟರ್‌ಗೆ 17,000 ರೂ. ನಿಗದಿಮಾಡಲಾಗಿದೆ” ಎಂದು ದೂರಿದ್ದಾರೆ.