ದೆಹಲಿ ಮಾಜಿ ಉಪಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ ಮತ್ತು ಮಾಜಿ ಸಚಿವ ಸತ್ಯೇಂದರ್ ಜೈನ್ ವಿರುದ್ಧ ಹೊಸದಾಗಿ ಮತ್ತೊಂದು ಪ್ರಕರಣ ದಾಖಲಾಗಿದೆ. ಶಾಲಾ ಕೊಠಡಿಗಳ ನಿರ್ಮಾಣದಲ್ಲಿ 2,000 ರೂ. ಹಗರಣ ನಡೆಸಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಹೊಸ ಪ್ರಕರಣ ದಾಖಲಿಸಿದೆ.
ದೆಹಲಿಯಲ್ಲಿ ಹಿಂದಿನ ಎಎಪಿ ಸರ್ಕಾರದಲ್ಲಿ ಸಿಸೋಡಿಯಾ ಅವರು ಶಿಕ್ಷಣ ಖಾತೆ ಸಚಿವರಾಗಿದ್ದರು. ಜೈನ್ ಅವರು ಸರ್ಕಾರಿ ಕಟ್ಟಡಗಳ ನಿರ್ಮಾಣ ಸಂಸ್ಥೆ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದರು. ಎಎಪಿ ಸರ್ಕಾರದ ಅವಧಿಯಲ್ಲಿ 12,000ಕ್ಕೂ ಹೆಚ್ಚು ತರಗತಿ ಕೊಠಡಿ ಮತ್ತು ಶಾಲಾ ಕಟ್ಟಡಗಳನ್ನು ದುಬಾರಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ, 2,000 ಕೋಟಿ ರೂ. ಮೌಲ್ಯದ ಅಕ್ರಮ ನಡೆದಿದೆ ಎಂದು ಎಸಿಬಿ ಆರೋಪಿಸಿದೆ.
ತರಗತಿ ಕೊಠಡಿಗಳನ್ನು 30 ವರ್ಷಗಳ ಕಾಲ ಬಾಳಿಕೆ ಬರುವ ಅರೆ-ಶಾಶ್ವತ ರಚನೆ (ಸೆಮಿ-ಪರ್ಮನೆಂಟ್ ಸ್ಟ್ರಕ್ಚರ್ – ಎಸ್‌ಪಿಎಸ್) ಮಾದರಿಯಲ್ಲಿ ನಿರ್ಮಿಸಲಾಗಿದೆ. ಆದಾಗ್ಯೂ, ನಿರ್ಮಾಣ ವೆಚ್ಚವು 75 ವರ್ಷಗಳ ಜೀವಿತಾವಧಿ ಹೊಂದಿರುವ ಪಕ್ಕಾ ತರಗತಿ ಕೊಠಡಿಗಳ ವೆಚ್ಚಕ್ಕೆ ಸಮನಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುವಾಗಿ ಎಸಿಬಿ ತಿಳಿಸಿದೆ.
ಶಾಲಾ ಕೊಠಡಿಗಳ ನಿರ್ಮಾಣ ಯೋಜನೆಯ ಅನುಷ್ಠಾನಕ್ಕಾಗಿ ಕನಿಷ್ಠ 34 ಗುತ್ತಿಗೆದಾರರನ್ನು ನಿಯೋಜಿಸಲಾಗಿತ್ತು. ಅವರಲ್ಲಿ ಹೆಚ್ಚಿನವರು ಆಡಳಿತಾರೂಢ ಎಎಪಿ ಜೊತೆಗೆ ನಿಕಟ ಸಂಬಂಧ ಹೊಂದಿದ್ದಾರೆ. ಅಲ್ಲದೆ, ನಿಗದಿತ ಸಮಯದೊಳಗೆ ನಿರ್ಮಾಣ ಪೂರ್ಣಗೊಂಡಿಲ್ಲ. ವಿಳಂಬವು ವೆಚ್ಚದಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಎಸಿಬಿ ತಿಳಿಸಿದೆ.
ಈ ವರದಿ ಓದಿದ್ದೀರಾ?: ಸಿಂಧು ಜಲ ಒಪ್ಪಂದ ಸ್ಥಗಿತವು ಭಾರತಕ್ಕೇ ಹಾನಿಕಾರಕ; ಯಾಕೆ ಗೊತ್ತೇ?
ಈ ಹಿಂದೆ, ಎಎಪಿ ಸರ್ಕಾರದ ವಿರುದ್ಧ ಅಬಕಾರಿ ನೀತಿ ಹಗರಣದ ಆರೋಪ ಹೊರಿಸಲಾಗಿತ್ತು. ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆಸಿದ ಆರೋಪದ ಮೇಲೆ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು. ಆ ನಂತರದಲ್ಲಿ, ಇದೇ ಪ್ರಕರಣದಲ್ಲಿ ತೆಲಂಗಾಣದ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರನ್ನು ಬಂಧಿಸಲಾಗಿತ್ತು. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಆಗ ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವರನ್ನೂ ಬಂಧಿಸಲಾಗಿತ್ತು. ಪ್ರಸ್ತುತ, ಎಲ್ಲರೂ ಜಾಮೀನು ಪಡೆದು ಹೊರಬಂದಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ಸಿಸೋಡಿಯಾ ಅವರು ನಿರಂತರ 2 ವರ್ಷಗಳ ಕಾಲ ಜೈಲಿನಲ್ಲಿದ್ದರು. ಇದೀಗ, ಅವರ ವಿರುದ್ಧ ಮತ್ತೊಂದು ಹೊಸ ಪ್ರಕರಣ ದಾಖಲಾಗಿದೆ. ಅವರನ್ನು ಮತ್ತೆ ಬಂಧಿಸುವ ಸಾಧ್ಯತೆಗಳಿವೆ.