- ಏತ ನೀರಾವರಿ ಯೋಜನೆಗೆ ವಿದ್ಯುತ್ ಬಳಕೆ
- ‘ಸೋಲಾರ್ ಅಳವಡಿಸುವ ಬಗ್ಗೆ ಯೋಚನೆ’
ರಾಜ್ಯ ನಿರಾವರಿ ಇಲಾಖೆ ನಾಲ್ಕು ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಮಂಗಳವಾರ ನಡೆದ ಏಳನೇ ದಿನದ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಏತ ನೀರಾವರಿ ಯೋಜನೆಗೆ ಉಚಿತ ವಿದ್ಯುತ್ ಕೊಡಿ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್ “ಏತ ನೀರಾವರಿ ಯೋಜನೆಗೆ ಬಳಕೆ ಮಾಡಿಕೊಳ್ಳುತ್ತಿರುವ ವಿದ್ಯುತ್ಗೆ ಬಿಲ್ ಕಟ್ಟಿಲ್ಲ. ಕೋಟಿ ಕೋಟಿ ಹಣ ಬಾಕಿ ಇಟ್ಟುಕೊಂಡಿದ್ದಾರೆ” ಎಂದರು.
“ತುಮಕೂರು ಗ್ರಾಮಾಂತರದಲ್ಲಿ ಆರು ಕೋಟಿ ರೂ. ಹಣ ಬಾಕಿ ಉಳಿದಿದೆ. ಚನ್ನಪಟ್ಟಣದಲ್ಲಿ ಐದು ಕೋಟಿ ರೂ. ಹಣ ಬಾಕಿ ಇದೆ. ತುಮಕೂರು ಗ್ರಾಮಾಂತರ, ಚನ್ನಪಟ್ಟಣದಲ್ಲಿ ಕೆರೆ ತುಂಬಿಸಲು ಏತ ನೀರಾವರಿ ಯೋಜನೆ ಬೇಕು ಅಂತಾರೆ. ಆದರೆ ಯಾರು ಸಹ ಇಂಧನ ಇಲಾಖೆಗೆ ಹಣ ಕೊಡುತ್ತಿಲ್ಲ. ಹೀಗಾಗಿ ಇಂಧನ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಗಳ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ” ಎಂದು ಹೇಳಿದರು.
ಇಂಧನ ಸಚಿವ ಕೆ ಜೆ ಜಾರ್ಜ್ ಮಾತನಾಡಿ, “ನಮ್ಮ ಇಲಾಖೆಗೆ ಬರಬೇಕಾದ ಬಾಕಿ ಹಣ ಜಾಸ್ತಿ ಇದೆ. ಯಾರೂ ಸಹ ಇಂಧನ ಇಲಾಖೆಗೆ ಪಾವತಿಸದೇ ಬಾಕಿ ಉಳಿದಿರುವ ಹಣ ನೀಡಿಲ್ಲ. ಹೀಗಾಗಿ ಸೋಲಾರ್ ಅಳವಡಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಆರ್ಥಿಕವಾಗಿ ಇದು ದುಬಾರಿ ಸಹ ಅಲ್ಲ” ಎಂದರು.