ಇಂದಿನ (ಜು.18) ವಿಧಾನಸಭಾ ಅಧಿವೇಶನ ಕಲಾಪದಲ್ಲಿ ಸಚಿವರ ಗೈರು ಎದ್ದು ಕಂಡಿತು. ಈ ವಿಚಾರವಾಗಿ ಪ್ರತಿಪಕ್ಷದ ಸದಸ್ಯ ಎಸ್ ಸುರೇಶ್ ಕುಮಾರ್ ಹಾಸ್ಯದ ದಾಟಿಯಲ್ಲಿಯೇ ವಾಗ್ದಾಳಿ ನಡೆಸಿದರು.
“ಮೊದಲ ಸಾಲಲ್ಲಿ ಕುಳಿತುಕೊಳ್ಳುವ ಒಂಬತ್ತು ಜನ ಸಚಿವರ ಪೈಕಿ ಒಬ್ಬರೂ ಕೂಡ ಇಲ್ಲಿ ಹಾಜರಿಲ್ಲ. ನಾವು ಹೇಗೆ ಚರ್ಚೆ ಮಾಡಬೇಕು. ಇಂದಿನ ಸದನವನ್ನು ಒಂದು ದಿನದ ಮಟ್ಟಿಗಾದರೂ ವಿರೋಧ ಪಕ್ಷಗಳ ಸಭೆ ನಡೆಯುತ್ತಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಸ್ಥಳಾಂತರಿಸಿ. ಇದರಿಂದ ಸಚಿವರಿಗೆ ಅನುಕೂಲವಾಗುತ್ತದೆ” ಎಂದು ವ್ಯಂಗ್ಯವಾಗಿಯೇ ಕುಟುಕಿದರು.
“ಮಾಜಿ ಸಿಎಂ ಬೊಮ್ಮಾಯಿ ಅವರು ಸುರೇಶ್ ಕುಮಾರ್ ಮಾತಿಗೆ ಧ್ವನಿಗೂಡಿಸಿ, “ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸದನ ನಡೆಸಿದ್ದರೆ ಕಾಂಗ್ರೆಸ್ ಸಚಿವರಿಗೆ ಬಹಳ ಅನುಕೂಲವಾಗುತ್ತಿತ್ತು” ಎಂದರು. ಬಿಜೆಪಿ ಸದಸ್ಯರು ಟೇಬಲ್ ತಟ್ಟಿ ಬೆಂಬಲ ಸೂಚಿಸಿದರು.
ಸಭಾಧ್ಯಕ್ಷ ಯು ಟಿ ಖಾದರ್ ಅವರು ಪ್ರತಿಕ್ರಿಯಿಸಿ, “ಅವಕಾಶವಿದ್ದರೆ ಖಂಡಿತವಾಗಿಯೂ ಅಲ್ಲೇ ಸದನ ನಡೆಸುತ್ತಿದ್ದೆ. ನಿಯಮಗಳಲ್ಲಿ ಅವಕಾಶವಿಲ್ಲ” ಎಂದು ಸುರೇಶ್ ಕುಮಾರ್ ಅವರನ್ನು ಸಮಾಧಾನಪಡಿಸಿದರು. ಇದಕ್ಕೆ ಸುರೇಶ್ ಕುಮಾರ್ ಮರು ಉತ್ತರಿಸಿ, “ನಿಮ್ಮ ಪರಮಾಧಿಕಾರ ಬಳಸಿ ಸದನ ಹೋಟೆಲ್‌ನಲ್ಲಿ ನಡೆಸಿ. ಮತ್ತಷ್ಟು ಬಿಗ್ ಇವೆಂಟ್ ಆಗುತ್ತದೆ” ಎಂದರು.
ಕಾಂಗ್ರೆಸ್ ಸದಸ್ಯರ ವಲಯದಿಂದ, “ನಿಮ್ಮ ಅವಧಿಯಲ್ಲೂ ಹೀಗೆ ಆಗಿತ್ತು” ಎಂದು ಸುರೇಶ್ ಕುಮಾರ್‌ಗೆ ತಿರುಗೇಟು ನೀಡಿದರು. ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ, “ಈ ಚರ್ಚೆ ಬೇಡ. ಸದನದ ವಿಷಯ ಮುಂದುವರಿಸಿ” ಎಂದು ಎಲ್ಲರಿಗೂ ಸಮಾಧಾನ ಮಾಡಿದರು.
