- ರಾಜ್ಯ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಕುಟುಂಬಸ್ಥರು
- 10 ತಿಂಗಳಿನ ಹಣ ಒಟ್ಟುಗೂಡಿಸಿ ಕಣ್ಣಿನ ಶಸ್ತ್ರಚಿಕಿತ್ಸೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ ಯೋಜನೆ’ಯಡಿ ನೀಡುವ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಹಣ ಬಡ ಮಹಿಳೆಯರ ಪಾಲಿಗೆ ಸಂಜೀವಿನಿಯಾಗಿದೆ. ಕಳೆದ 10 ತಿಂಗಳಿಂದ ಬಂದ ಹಣವನ್ನು ಒಟ್ಟುಗೂಡಿಸಿ ವೃದ್ಧ ಮಹಿಳೆಯೊಬ್ಬರು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುರೇಬಾನದ ಮನಿಹಾಳ ಗ್ರಾಮದ ಸಕ್ಕುಬಾಯಿ ಈರಣ್ಣ ಕರದಿನ ಎಂಬುವರು ಗೃಹಲಕ್ಷ್ಮಿ ಹಣದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ.
ಸಕ್ಕುಬಾಯಿ ಅವರು ಹಲವು ತಿಂಗಳಿಂದ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದರು. ಬಲಗಣ್ಣಿನಲ್ಲಿ ಪೊರೆ ಬಂದಿದ್ದ ಕಾರಣ ಶಸ್ತ್ರಚಿಕಿತ್ಸೆ ಅವರಿಗೆ ಅನಿವಾರ್ಯವಾಗಿತ್ತು. ಹಣಕಾಸಿನ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಸುಮ್ಮನಿದ್ದ ಸಕ್ಕುಬಾಯಿ, ಕಳೆದ 10 ತಿಂಗಳಿಂದ ರಾಜ್ಯ ಸರ್ಕಾರದಿಂದ ಬಂದ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನು ಕೂಡಿಟ್ಡು, ಕಳೆದ ವಾರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಪತಿ ಈರಣ್ಣ ಕರದಿನ ನೇಕಾರರಾಗಿ ಕೆಲಸ ಮಾಡುತ್ತಿದ್ದು, ಮೂರು ಮಕ್ಕಳ ಕೂಡು ಕುಟುಂಬ ಇವರದ್ದಾಗಿದೆ.
“ಗೃಹಲಕ್ಷ್ಮಿ ಯೋಜನೆ ನಮ್ಮ ಕುಟುಂಬವನ್ನು ಕೈಹಿಡಿತು. ಎರಡ್ಮೂರು ಸಲ ಆಸ್ಪತ್ರೆಗೆ ಹೋಗಿದ್ದಾಗ, ನಮ್ಮ ಕಡೆ ಅಷ್ಟು ಹಣ ಇರಲಿಲ್ಲ. ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಹಿಂದಿನ ಮಂಗಳವಾರ ನನ್ನ ಪತ್ನಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದೆ. ಒಟ್ಟು 26 ಸಾವಿರ ಬಿಲ್ ಆಗಿದ್ದು, ಗೃಹಲಕ್ಷ್ಮಿ ಯೋಜನೆಯಿಂದ 20 ಸಾವಿರ ರೂಪಾಯಿ ಕೂಡಿಟ್ಟಿದ್ದೇವು. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅನುಕೂಲವಾಯಿತು” ಎಂದು ಈರಣ್ಣ ಕರದಿನ ಈ ದಿನ.ಕಾಮ್ ಜೊತೆ ಸಂತಸ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಸಕ್ಕುಬಾಯಿ
ಸಕ್ಕುಬಾಯಿ ಕರದಿನ ಈ ದಿನ.ಕಾಮ್ ಜೊತೆ ಮಾತನಾಡಿ, “ಕಾಂಗ್ರೆಸ್ ಸರ್ಕಾರಕ್ಕೆ ನಾನು ಧನ್ಯವಾದ ಹೇಳಲೇಬೇಕು. ಗೃಹಲಕ್ಷ್ಮಿ ಹಣ ನನಗೆ ಸಿಗದೇ ಹೋಗಿದ್ದರೆ ನನ್ನ ಕಣ್ಣಿನ ಆಪರೇಷನ್ ಆಗತ್ತಲೇ ಇರಲಿಲ್ಲ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ನಮ್ಮ ಜಿಲ್ಲೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ತಿಳಿಸುವೆ” ಎಂದರು.
ಗೃಹಲಕ್ಷ್ಮಿ ಹಣದಿಂದ ಬಡ ಮಹಿಳೆಯೊಬ್ಬರು ಮೊನ್ನೆಯಷ್ಟೇ ತಮ್ಮ ಮನೆಗೆ ಫ್ರಿಜ್ ಖರೀದಿಸಿದ್ದರು. ಮಕ್ಕಳ ಶಾಲಾ ಶುಲ್ಕ ಕಟ್ಟಿದವರು, ಮಕ್ಕಳಿಗೆ ಸೈಕಲ್ ಕೊಂಡವರು, ಚಿನ್ನದ ಸರ, ಓಲೆ, ತಾಳಿ, ಮೊಬೈಲ್ ಕೊಂಡವರ ಕತೆಗಳನ್ನು ಕೇಳಿದ್ದೆವು. ಇದೀಗ ಸಕ್ಕುಬಾಯಿ ಕಣ್ಣಿನ ಚಿಕಿತ್ಸೆ ಮಾಡಿಕೊಂಡು ʼದೃಷ್ಟಿಭಾಗ್ಯʼ ದಕ್ಕಿಸಿಕೊಂಡಿದ್ದಾರೆ.
ಬಡ ವಿದ್ಯಾರ್ಥಿಗಳ ಪಾಲಿಗೆ ಗೃಹಲಕ್ಷ್ಮಿ ಯೋಜನೆ ಹಲವು ರೀತಿಯಲ್ಲಿ ವರದಾನವಾಗಿದೆ. ಇಂತಹ ಯಶಸ್ಸಿನ ಸಾಲಿಗೆ ಸಕ್ಕುಬಾಯಿ ಕೂಡ ಸೇರಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂತಹ ಹತ್ತಾರು ಉದಾಹರಣೆ ಸಿಗುತ್ತವೆ. ಜನಪರ, ಬಡವರ ಪರ ಸರ್ಕಾರದ ಯೋಜನೆಯೊಂದು ವರ್ಷದೊಳಗೆ ಹೀಗೆ ಯಶಸ್ವಿನ ಕತೆಗಳನ್ನು ಹೇಳುತ್ತಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.
It is a commendable news. But the question remains, what has happened to SANJEEVINI scheme for such operations?.