ಕಾರ್ಯಕ್ರಮದಲ್ಲಿ ಮೋದಿ ಅವರು ಮುಂಚೂಣಿಯಲ್ಲಿ ಇರುತ್ತಾರೆ. ಅದು, ಸನಾತನ ಶಾಸ್ತ್ರಗಳು ನಿರ್ದೇಶಿಸಿದ ಸಾಂಪ್ರದಾಯಿಕ ಆಚರಣೆಗಳನ್ನು ದುರ್ಬಲಗೊಳಿಸಬಹುದು. ರಾಮಮಂದಿರ ನಿರ್ಮಾಣದ ಲಕ್ಷಣಗಳು ಪಾವಿತ್ರ್ಯತೆ ಹೊಂದಿಲ್ಲ ಎಂಬ ಭಾವನೆ ಅವರಲ್ಲಿದೆ…!
ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಸನಾತನ ಹಿಂದು ಧರ್ಮದ ಪ್ರಮುಖ ಗುರು, ಆಧ್ಯಾತ್ಮಿಕ ನಾಯಕರಾದ ನಾಲ್ಕು ಮಂದಿ ಶಂಕರಾಚಾರ್ಯರು ಭಾಗವಹಿಸುವುದಿಲ್ಲ ಎಂದು ಹಿಂದುತ್ವವಾದಿ ಪೋರ್ಟಲ್ ‘ದಿ ಸ್ಟ್ರಗಲ್ ಫಾರ್ ಹಿಂದು ಎಕ್ಸಿಸ್ಟನ್ಸ್’ ವರದಿ ಮಾಡಿದೆ. (ಈ ಪೋರ್ಟಲ್ ಜಾಗತಿಕವಾಗಿ ಹಿಂದುಗಳನ್ನು ರಕ್ಷಿಸಲು ಮತ್ತು ಅವರ ಪರವಾಗಿ ಹೋರಾಡಲು ಎಲ್ಲರನ್ನು ಒಗ್ಗೂಡಿಸುವ ವೇದಿಕೆ ಎಂದು ಹೇಳಿಕೊಂಡಿದೆ.)
ಅಂದಹಾಗೆ, ಜನವರಿ 22ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದ ಕೇಂದ್ರ ಬಿಂದು ಪ್ರಧಾನಿ ನರೇಂದ್ರ ಮೋದಿ ಅವರಾಗಿರುತ್ತಾರೆ. ಮಹಾಮಸ್ತಕಾಭಿಷೇಕ ಸಮಾರಂಭದ ಮುಖ್ಯ ಆಯೋಜಕರಾಗಿ ಮೋದಿ ಅವರು ತೊಡಗಿಸಿಕೊಂಡಿರುವುದು ಹಿರಿಯ ಧಾರ್ಮಿಕ ದಾರ್ಶನಿಕರಲ್ಲಿ ‘ಕಳವಳ’ ಹುಟ್ಟುಹಾಕಿದೆ ಎಂದು ಹೇಳಲಾಗಿದೆ.
“ಕಾರ್ಯಕ್ರಮದಲ್ಲಿ ಮೋದಿ ಅವರು ಮುಂಚೂಣಿಯಲ್ಲಿ ಇರುತ್ತಾರೆ. ಅದು, ಸನಾತನ ಶಾಸ್ತ್ರಗಳು ನಿರ್ದೇಶಿಸಿದ ಸಾಂಪ್ರದಾಯಿಕ ಆಚರಣೆಗಳನ್ನು ದುರ್ಬಲಗೊಳಿಸಬಹುದು ಎಂದು ಅವರು ಭಾವಿಸಿದ್ದಾರೆ. ರಾಮಮಂದಿರ ಪ್ರತಿಷ್ಠಾಪನೆಯ ಉತ್ಸಾಹದ ಹೊರತಾಗಿಯೂ, ಈ ನಾಲ್ವರ ಗೈರುಹಾಜರಿಯು ಧರ್ಮನಿಷ್ಠ ಹಿಂದುಗಳಲ್ಲಿ ವಿವಾದದ ಅಂಶವಾಗಿದೆ,” ಎಂದು ಪೋರ್ಟಲ್ ವರದಿ ಮಾಡಿದೆ.
ಪವಿತ್ರ ಮಂದಿರ ನಿರ್ಮಾಣ ಕೇಂದ್ರೀಕೃತವಾಗಿಲ್ಲ
ಪೂರ್ವಾಮ್ನಾಯ ಗೋವರ್ಧನಮಠದ ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಅವರು ಹೇಳುವ ಪ್ರಕಾರ, “ಸರಕಾರದ ಪ್ರಯತ್ನವು ‘ಪವಿತ್ರ ಮಂದಿರ’ ನಿರ್ಮಾಣದತ್ತ ಕೇಂದ್ರೀಕೃತವಾಗಿಲ್ಲ (ಅವರ ಮಾತಿನಲ್ಲಿ ‘ಸಮಾಧಿ’). ರಾಮಮಂದಿರ ನಿರ್ಮಾಣದಲ್ಲಿ ತೋರುತ್ತಿರುವ ಲಕ್ಷಣಗಳು ‘ಸಾಂಪ್ರದಾಯಿಕ ದೇವಾಲಯ ನಿರ್ಮಾಣ’ದಲ್ಲಿ ಅಂತರ್ಗತವಾಗಿರುವ ಪಾವಿತ್ರ್ಯತೆ ಮತ್ತು ಗೌರವವನ್ನು ಹೊಂದಿಲ್ಲ ಎಂಬ ಗ್ರಹಿಕೆಯನ್ನು ಸೂಚಿಸುತ್ತದೆ.”
ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಾಗದಿರಲು ಅವರ ನಿರ್ಧಾರದಲ್ಲಿ, ‘ಯೋಗ್ಯವಾದ ಗೌರವದ ಕೊರತೆ’ಯೂ ಒಂದಾಗಿದೆ. ಅವರ ಸ್ಥಾನಕ್ಕೆ ಸಂಬಂಧಿಸಿದ ಘನತೆ ಮತ್ತು ವೈಭವವನ್ನು ಕಾಪಾಡಿಕೊಳ್ಳುವ ಬದ್ಧತೆಯಿಂದ ಬೇರೂರಿದೆ. ಭಾಗವಹಿಸಲು ಇಷ್ಟವಿಲ್ಲದಿರುವುದು ಶ್ರೀರಾಮನ ಮೇಲಿನ ಗೌರವದ ನಿರಾಕರಣೆ ಅಲ್ಲ, ಬದಲಿಗೆ ಕೆಲವು ನಾಯಕರ ಅವಕಾಶವಾದಿ ಮತ್ತು ಕುಶಲ ರಾಜಕೀಯದ ವಿರುದ್ಧದ ನಿಲುವು. ಈ ನಿಲುವು ಆಧ್ಯಾತ್ಮಿಕ ನಾಯಕತ್ವದ ಸ್ವಾತಂತ್ರ್ಯ ಮತ್ತು ನೈತಿಕ ಸಮಗ್ರತೆಯನ್ನು ಒತ್ತಿಹೇಳುತ್ತದೆ ಎಂದು ಹೇಳಲಾಗಿದೆ.
ಇನ್ನೂ ನಿರ್ಮಾಣ ಹಂತದಲ್ಲಿದೆ
ಶೃಂಗೇರಿ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಭಾರತೀ ತೀರ್ಥ ಅವರು, ರಾಮ ಮಂದಿರ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರೂ, ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ‘ದೇವಾಲಯವು ಇನ್ನೂ ನಿರ್ಮಾಣ ಹಂತದಲ್ಲಿದೆ’ ಎಂಬ ಅಂಶದ ಬಗ್ಗೆ ಅವರು ಗಮನ ಸೆಳೆದಿದ್ದಾರೆ. “ಇನ್ನೂ ಪೂರ್ಣಗೊಳ್ಳದ ಕಟ್ಟಡದಲ್ಲಿ ದೈವತ್ವವನ್ನು ಪವಿತ್ರಗೊಳಿಸುವುದು ಸಮಂಜಸವಲ್ಲ” ಎಂಬುದನ್ನು ಅವರು ಪರಿಗಣಿಸಿದ್ದಾರೆ.
ಅಲ್ಲದೆ, ರಾಮಮಂದಿರ ನಿರ್ಮಾಣದ ವೇಳೆ ರಾಮಮಂದಿರ ಟ್ರಸ್ಟ್ ಅವರಿಂದ ಅಥವಾ ಅವರ ಪ್ರತಿನಿಧಿಗಳಿಂದ ಸಲಹೆ ಪಡೆದಿಲ್ಲ. ಪ್ರಮುಖ ಆಧ್ಯಾತ್ಮಿಕ ನಾಯಕರೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂಬುದು ಕೂಡ ಅವರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಪೋರ್ಟಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಪೋರ್ಟಲ್ ಪ್ರಕಾರ, “ಮೋದಿ ಸರ್ಕಾರವು ‘ದ್ವಂದ್ವ ನಿಲುವನ್ನು’ ಹೊಂದಿದೆ. ರಾಮ ಮಂದಿರ ನಿರ್ಮಾಣವನ್ನು ಕಾರ್ಯಗತಗೊಳಿಸಿದರೂ ಸರ್ಕಾರವು ರಾಜಕೀಯ ಲಾಭಕ್ಕಾಗಿ ಹಿಂದು ಭಾವನೆಗಳನ್ನು ಬಳಸಿಕೊಳ್ಳುತ್ತಿದೆ” ಎಂದು ಅವರು ವಾದಿಸುತ್ತಾರೆ. ಅವರ ತರ್ಕವು ಸರ್ಕಾರದ ಉದ್ದೇಶಗಳು ಧಾರ್ಮಿಕ ಸಮುದಾಯದ ಸಮಗ್ರ ಯೋಗಕ್ಷೇಮದ ಕುರಿತಾದ ಬದ್ಧತೆಯ ಬಗೆಗಿನ ಸಂದೇಹವನ್ನು ಪ್ರತಿಬಿಂಬಿಸುತ್ತದೆ.
ಸೂಕ್ತ ಸಮಯವಲ್ಲ
ಪಶ್ಚಿಮ್ನಾಯ ದ್ವಾರಕಾ ಶಾರದಾಪೀಠದ ಶಂಕರಾಚಾರ್ಯ ಸದಾನಂದ ಸರಸ್ವತಿ ಸ್ವಾಮಿ ಅವರು ರಾಮಮಂದಿರ ಮಹೋತ್ಸವದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಪವಿತ್ರೀಕರಣದ ಸಮಯದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ‘ಧರ್ಮಗ್ರಂಥಗಳ ಪ್ರಕಾರ, ಅಶುಭ ಮಾಸದಲ್ಲಿ ದೇವರ ಜೀವನಾಭಿಷೇಕದ ದೀಕ್ಷೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.
ಜನವರಿ ತಿಂಗಳು ಅಶುಭ ಮಾಸ. ಆ ತಿಂಗಳು ರಾಮಮಂದಿರ ಉದ್ಘಾಟನೆಗೆ ಸೂಕ್ತವಲ್ಲವೆಂದು ಪರಿಗಣಿಸಲಾಗಿದೆ. ರಾಮನವಮಿ, ರಾಮನ ಜನ್ಮದಿನವು ಮಂದಿರ ಉದ್ಘಾಟನೆಗೆ ಹೆಚ್ಚು ಸೂಕ್ತವಾದ ಸಮಯ ಎಂದು ಅವರು ಪ್ರಸ್ತಾಪಿಸುತ್ತಾರೆ.
ವಿವಾದದ ಕೇಂದ್ರ ಬಿಂದುವೆಂದರೆ, ‘ಸಮಾರಂಭದ ರಾಜಕೀಕರಣ’ ಎಂದು ಗ್ರಹಿಸಲಾಗಿದೆ. ಸದಾನಂದ ಸರಸ್ವತಿ ಸ್ವಾಮಿ ಅವರು ಈ ಕ್ಷಣದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕಕ್ಕೆ ರಾಜಕೀಯವೇ ಪ್ರಾಥಮಿಕ ಕಾರಣ ಎಂದು ಹೇಳುತ್ತಾರೆ.
ರಾಮನವಮಿಯಂದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆಗ, ಉದ್ಘಾಟನೆಯಾದರೆ, ಬಿಜೆಪಿಗರು ದೇವಾಲಯದ ಮೈಲೇಜ್ ಪಡೆಯಲಾಗುವುದಿಲ್ಲ. ತಮ್ಮ ರಾಜಕೀಯ ದೃಷ್ಟಿಕೋನದಿಂದ ದೇವಾಲಯದ ಪ್ರತಿಷ್ಠಾಪನೆಯ ನಿರ್ಧಾರ ಮಾಡಲಾಗಿದೆ ಎಂದು ಅವರು ರಾಜಕೀಯ ಆಯಾಮವನ್ನು ಗಮನಿಸಿದ್ದಾರೆ.
ಆದಾಗ್ಯೂ, ದೇವಾಲಯದ ನಿರ್ಮಾಣ ಪೂರ್ಣಗೊಳಿಸುವ ಮೊದಲು ಅದನ್ನು ಪವಿತ್ರಗೊಳಿಸುವುದರ ಹಿಂದಿನ ತಾರ್ಕಿಕತೆಯನ್ನು ಅವರು ಪ್ರಶ್ನಿಸುತ್ತಾರೆ. “ಸಂಪೂರ್ಣವಾಗಿ ರೂಪುಗೊಳ್ಳುವವರೆಗೆ ಮನೆಯನ್ನು ಪ್ರವೇಶಿಸುವುದಿಲ್ಲ” ಎಂದು ಅವರು ಹೇಳುತ್ತಾರೆ.
ಧರ್ಮಶಾಸ್ತ್ರ ವಿರೋಧಿ
ಉತ್ತರಾಮ್ನಾಯ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಜನವರಿ 2ರಂದು ಅಯೋಧ್ಯೆಗೆ ಹೋಗುವುದಿಲ್ಲ ಎಂದಿದ್ದಾರೆ. “ಹಮ್ ಮೋದಿ ವಿರೋಧಿ ನಹೀ ಹೈ, ಲೇಕಿನ್ ಹಮ್ ವಿರೋಧಿ -ಧರ್ಮಶಾಸ್ತ್ರ ಭೀ ನಹಿ ಹೋನಾ ಚಾಹ್ತೆ (ನಾವು ಮೋದಿ ವಿರೋಧಿಗಳಲ್ಲ, ಆದರೆ ನಾವು ಧರ್ಮಶಾಸ್ತ್ರ ವಿರೋಧಿಯಾಗಲೂ ಬಯಸುವುದಿಲ್ಲ)” ಎಂದು ಅವರು ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.
“ಹಿಂದೂ ಧರ್ಮದಲ್ಲಿನ ಮೂಲ ಗ್ರಂಥಗಳಾದ ವೇದಗಳು ಪುರೋಹಿತಶಾಹಿಯ ಪಾತ್ರಕ್ಕೆ ವಿಶಿಷ್ಟವಾದ ನಿಬಂಧನೆ ನೀಡಿವೆ. ಅದನ್ನು ಬ್ರಾಹ್ಮಣರಿಗೆ ಮೀಸಲಿಡುತ್ತವೆ. ವೈದಿಕ ಸಂಪ್ರದಾಯಗಳ ಪ್ರಕಾರ, ಪುರೋಹಿತಶಾಹಿಯನ್ನು ಬ್ರಾಹ್ಮಣ ಜಾತಿಗೆ ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಶೂದ್ರರನ್ನು ದೇವಾಲಯದ ಅರ್ಚಕರನ್ನಾಗಿ ನೇಮಿಸಬಾರದು. ಇದು ವೇದಗಳಲ್ಲಿ ವಿವರಿಸಿರುವ ಧಾರ್ಮಿಕ ತತ್ವಗಳಿಗೆ ವಿರುದ್ಧವಾಗಿದೆ” ಎಂದು ಅವರು ಹೇಳಿರುವುದಾಗಿ ಹಿಂದುತ್ವವಾದಿ ಪೋರ್ಟಲ್ ಉಲ್ಲೇಖಿಸಿದೆ.
“ಸನಾತನ ಮೌಲ್ಯಗಳು ಮತ್ತು ಘನತೆಗಳನ್ನು ಹಾಳುಮಾಡಲು ಈಗ ನರೇಂದ್ರ ಮೋದಿಯವರು ಅಧಾರ್ಮಿಕ ಪಾತ್ರವನ್ನು ವಹಿಸುತ್ತಿದ್ದಾರೆ. ಅವರು ತಮ್ಮ ರಾಜಕೀಯ ಏಳಿಗೆಗಾಗಿ ಆಶೀರ್ವಾದ ಪಡೆಯಲು ಒಮ್ಮೆ ಶಂಕರಾಚಾರ್ಯರ ಪಾದದ ಬಳಿ ನೋಡಿರುವುದು ದುರದೃಷ್ಟಕರ” ಎಂದು ಹಿಂದುತ್ವವಾದಿ ಪೋರ್ಟಲ್ ಹೇಳಿದೆ.
“ಹಿಂದು ಧರ್ಮದ ಅತ್ಯುನ್ನತ ಧರ್ಮಗುರುಗಳು ಬಹು ನಿರೀಕ್ಷಿತ ರಾಮ ಮಂದಿರದ ಪ್ರತಿಷ್ಠಾಪನೆಯಲ್ಲಿ ಭಾಗವಹಿಸದಿರುವುದು ನಿಜವಾಗಿಯೂ ದುರದೃಷ್ಟಕರ. ಇದು ಧಾರ್ಮಿಕ ಹಿನ್ನಡೆ ಮಾತ್ರವಲ್ಲದೆ, ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳನ್ನು ಹೊಂದಿದೆ” ಎಂದು ಕೂಡ ಪೋರ್ಟಲ್ ಹೇಳುತ್ತದೆ.
“ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ಅತ್ಯಂತ ಪವಿತ್ರ ಮತ್ತು ಅಪರೂಪದ ಪ್ರಾಣಪ್ರತಿಷ್ಠೆಯಲ್ಲಿ ಪ್ರತಿಯೊಬ್ಬ ಆಸ್ತಿಕರು ಭಾಗವಹಿಸಿ ಶ್ರೀರಾಮನ ಅಪರಿಮಿತ ಕೃಪೆಗೆ ಪಾತ್ರರಾಗಬೇಕು ಎಂದು ಶೃಂಗೇರಿ ಶಂಕರಾಚಾರ್ಯ ಭಾರತೀತೀರ್ಥ ಅವರು ಆಶೀರ್ವಚನ ನೀಡಿದರು. ಆದರೆ, ಅವರೇ ಅಯೋಧ್ಯೆಯಲ್ಲಿ ನಡೆಯುವ ಪ್ರಾಣ-ಪ್ರತಿಷ್ಠೆಯಲ್ಲಿ ಭಾಗವಹಿಸುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸಂಶಯವಿದೆ” ಎಂದು ಪೋರ್ಟಲ್ ಹೇಳುತ್ತದೆ.