- ಉತ್ತರ ಪ್ರದೇಶದ ರಾಂಪುರದ ಸಿವಿಲ್ ಲೇನ್ಸ್ ಠಾಣೆಯಲ್ಲಿ ಪ್ರಕರಣ ದಾಖಲು
- ವಕೀಲರಾದ ಹರ್ಷ ಗುಪ್ತ, ರಾಮ್ ಸಿಂಗ್ ಲೋಧಿ ದೂರಿನ ಮೇರೆಗೆ ಎಫ್‌ಐಆರ್
ಸನಾತನ ಧರ್ಮ ಹೇಳಿಕೆ ವಿಚಾರವಾಗಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಉತ್ತರ ಪ್ರದೇಶದ ರಾಂಪುರದಲ್ಲಿ ಪ್ರಕರಣ ದಾಖಲಾಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 295 ಎ (ಧಾರ್ಮಿಕ ಭಾವನೆ ಕೆರಳಿಸುವ, ಉದ್ದೇಶಪೂರ್ವಕ, ದುರುದ್ದೇಶದ ಕೃತ್ಯಗಳು) ಮತ್ತು 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದನೆ) ಅಡಿಯಲ್ಲಿ ಇಲ್ಲಿನ ಸಿವಿಲ್ ಲೇನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡಿನಲ್ಲಿ ಕಳೆದ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಕೆ ಮಾಡಿದ್ದರು. ನಂತರ ಸನಾತನ ಧರ್ಮ ನಿರ್ಮೂಲನೆ ಆಗಬೇಕು ಎಂದಿದ್ದರು. ಅವರ ವಿರುದ್ಧ ದೇಶಾದ್ಯಂತ ಹಿಂದೂಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಉದಯನಿಧಿ ಹೇಳಿಕೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೌರಿ ಲಂಕೇಶ್ ಹಂತಕರಿಗೆ ಶೀಘ್ರವೇ ದೊರೆಯಲಿ ಶಿಕ್ಷೆಯ ಮೋಕ್ಷ!
ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಮಾಜಿ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಸೇರಿದಂತೆ 260ಕ್ಕೂ ಹೆಚ್ಚು ಗಣ್ಯರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದರು. ವಕೀಲರಾದ ಹರ್ಷ ಗುಪ್ತ ಮತ್ತು ರಾಮ್ ಸಿಂಗ್ ಲೋಧಿ ಅವರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.