ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ಭರಾಟೆ ಜೋರಾಗಿದೆ. ಮೂರು ಕ್ಷೇತ್ರಗಳಲ್ಲೂ ಪ್ರಮುಖ ಪಕ್ಷಗಳು ತಲಾ ಒಂದೊಂದು ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿವೆ. ಜೊತೆಗೆ, ಬಂಡಾಯದ ಬಿಸಿಯನ್ನೂ ಎದುರಿಸುತ್ತಿವೆ. ರೆಡ್ಡಿ ಸಹೋದರರು ತಮ್ಮ ‘ಸಾಮ್ರಾಜ್ಯ’ ಮಾಡಿಕೊಂಡಿದ್ದ, ಗಣಿ ಜಿಲ್ಲೆಯೆಂದೇ ಕರೆಯಲಾಗುತ್ತಿರುವ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರವು ಗಣಿ ಕುಳಗಳು ಮತ್ತು ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿ ಪರ ಪ್ರಚಾರದಲ್ಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಒಗ್ಗೂಡಿದ್ದಾರೆ. ಬಳ್ಳಾರಿಯು ಸಂಸದ ತುಕಾರಾಮ್ ಮತ್ತು ಸಚಿವ ಸಂತೋಷ್ ಲಾಡ್ ಅವರ ತವರು ಜಿಲ್ಲೆಯಾಗಿದ್ದು, ಸಂಡೂರು ಚುನಾವಣೆ ಸಂತೋಷ್ ಲಾಡ್ ಅವರಿಗೂ ಪ್ರತಿಷ್ಠೆಯ ಕಣವಾಗಿದೆ.
ಸಂಡೂರು ಕ್ಷೇತ್ರದ ಉಪಚುನಾವಣೆಯಲ್ಲಿ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರ ಪೈಕಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನಮಂತು ಮತ್ತು ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಸಂಸದ ಇ ತುಕಾರಾಮ್ ಅವರು ತಮ್ಮ ಪತ್ನಿಗೆ ಟಿಕೆಟ್ ಕೊಡಿಸಿದ್ದು, ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೂಡ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಿದೆ ಎಂಬ ಆರೋಪಗಳು ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಇದನ್ನೇ, ಬಂಡವಾಳ ಮಾಡಿಕೊಂಡು, ಮತ ಕ್ರೋಡೀಕರಣಕ್ಕೆ ಬಿಜೆಪಿ ಮುಂದಾಗಿದೆ.
ಈ ಹಿಂದೆ, ಇದೇ ಕ್ಷೇತ್ರವನ್ನು ವಿಧಾನಸಭೆಯಲ್ಲಿ ತುಕಾರಾಮ್ ಪ್ರತಿನಿಧಿಸುತ್ತಿದ್ದರು. ಬಳಿಕ, ಅವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲಾಗಿತ್ತು. ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಗೆದ್ದು, ಸಂಸದರಾದರು. ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಾಗಲೇ, ಸಂಡೂರು ಉಪಚುನಾವಣೆಗೆ ತಮ್ಮ ಕುಟುಂಬದವರಿಗೆ ಟಿಕೆಟ್ ನೀಡಬೇಕೆಂದು ಷರತ್ತನ್ನೂ ಹಾಕಿದ್ದರೆಂದು ಹೇಳಲಾಗಿದೆ. ಅದರಂತೆ, ತುಕಾರಾಮ್ ಅವರು ತಮ್ಮ ಪತ್ನಿಗೆ ಟಿಕೆಟ್ ಪಡೆದುಕೊಂಡಿದ್ದಾರೆ.
ಸಂಡೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರಿಗೆ ಸಂಸದ ತುಕಾರಾಮ್, ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಜಿಲ್ಲೆಯವರೇ ಆಗಿದ್ದು, ಜಿಲ್ಲೆಯಲ್ಲಿ ಭಾರೀ ಹಿಡಿತ ಹೊಂದಿರುವ ಸಂತೋಷ್ ಲಾಡ್ ಸಾಥ್ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆಂದು ಅನ್ನಪೂರ್ಣ ವಿಶ್ವಾಸದಲ್ಲಿದ್ದಾರೆ. ‘ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಟಿಕೆಟ್ ದೊರೆತಿದೆ. ಸಂತೋಷ್ ದಾದಾ, ತುಕಾರಾಮ್ ಅವರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಹೇಳುತ್ತಿದ್ದಾರೆ.
ಮುಖ್ಯವಾಗಿ, ಸಂತೋಷ್ ಲಾಡ್ ಅವರು ಇದೇ ಕ್ಷೇತ್ರದಲ್ಲಿ 2004ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಗೆದ್ದಿದ್ದರು. ಅವರಾದ ಬಳಿಕ, ತುಕಾರಾಮ್ ಅವರು 2008ರಿಂದ ಈವರೆಗೆ 4 ಬಾರಿ ಶಾಸಕರಾಗಿ ನಿರಂತರವಾಗಿ ಗೆಲುವು ಸಾಧಿಸಿದ್ದಾರೆ. ಮಾತ್ರವಲ್ಲದೆ, ಸಂಡೂರನ್ನೂ ಒಳಗೊಂಡು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಈಗ ಸಂಸದರಾಗಿಯೂ ಆಯ್ಕೆಯಾಗಿದ್ದಾರೆ. ಹೀಗಾಗಿ, ಈ ಇಬ್ಬರಿಗೂ ಸಂಡೂರು ಪ್ರತಿಷ್ಠೆಯ ಕಣ.
ಅತ್ತ, ಬಳ್ಳಾರಿಯ ಶ್ರೀಮಂತರಲ್ಲಿ ಒಬ್ಬರಾದ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನಮಂತು ಅವರು ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಅವರ ಬೆನ್ನಿಗೆ ಜನಾರ್ದನ ರೆಡ್ಡಿ, ಶ್ರೀರಾಮುಲು ನಿಂತಿದ್ದಾರೆ. ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಕೂಡ ಜೊತೆಗೂಡಿದ್ದಾರೆ. ಕಾಂಗ್ರೆಸ್ ಕೋಟೆಯನ್ನು ಛಿದ್ರಗೊಳಿಸಿ, ಕಮಲ ಅರಳಿಸಲು ಹವಣಿಸುತ್ತಿದ್ದಾರೆ. ಆದರೆ, ಕ್ಷೇತ್ರದವರಿಗೆ, ಸ್ಥಳೀಯರಿಗೆ ಟಿಕೆಟ್ ಕೊಡದೆ, ಹೊರಗಿನವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ ಎಂಬ ಅಸಮಾಧಾನ ಬಿಜೆಪಿಯಲ್ಲಿದೆ.
ಗಮನಾರ್ಹ ಸಂಗತಿ ಎಂದರೆ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಬಳ್ಳಾರಿಯನ್ನು ತಮ್ಮ ಗಣಿ ಉದ್ಯಮದ ಸಾಮ್ರಾಜ್ಯ ಮಾಡಿಕೊಂಡಿದ್ದರು. 2008ರಲ್ಲಿ ಬಳ್ಳಾರಿಯಿಂದ ಗೆದ್ದು ಶ್ರೀರಾಮುಲು ಶಾಸಕರಾದರೆ, ರೆಡ್ಡಿ ಎಂಎಲ್‌ಸಿ ಆಗಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಇಬ್ಬರೂ ಕೂಡ ಮಂತ್ರಿಗಿರಿ ಪಡೆದುಕೊಂಡಿದ್ದರು. ಬಳ್ಳಾರಿಯಲ್ಲಿ ಶ್ರೀರಾಮುಲು ನಿರಂತರವಾಗಿ ಗೆಲ್ಲುತ್ತಾ ಸಾಗಿದರೆ, ಗಣಿ ಅಕ್ರಮದಲ್ಲಿ ರೆಡ್ಡಿ ಜೈಲು ಪಾಲಾಗಿ, ಹೊರಬಂದರು.
2023ರ ವಿಧಾನಸಭಾ ಚುನಾವಣೆ ವೇಳಗೆ, ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಪರಸ್ಪರ ವಿರೋಧಿಗಳಂತೆ ಕಾಣಿಸಿಕೊಂಡಿದ್ದರು. ಆ ಚುನಾವಣೆಯಲ್ಲಿ ಶ್ರೀರಾಮುಲು ಸೋಲುಂಡರು. ಬಿಜೆಪಿ ತೊರೆದಿದ್ದ ರೆಡ್ಡಿ, ತಮ್ಮದೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಕಟ್ಟಿದ್ದರು. ಅದೇ ಪಕ್ಷದಿಂದ ಸ್ಪರ್ಧಿಸಿ ಶಾಸಕರೂ ಆದರು. ಆದರೆ, 2024ರ ಲೋಕಸಭಾ ಚುನಾವಣೆಯ ವೇಳೆಗೆ, ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿ, ಮತ್ತೆ ಶ್ರೀರಾಮುಲು ಸಖ್ಯ ಬೆಳೆಸಿದರು. ಜೊತೆಗೆ, 14 ವರ್ಷಗಳಿಂದ ಬಳ್ಳಾರಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧಕ್ಕೆ ಒಳಗಾಗಿದ್ದ ರೆಡ್ಡಿಗೆ ಇದೀಗ, ಬಳ್ಳಾರಿ ಪ್ರವೇಶಕ್ಕೆ ಅವಕಾಶವೂ ದೊರೆತಿದೆ. ಹೀಗಾಗಿ, ಬಿಜೆಪಿಗೆ ಬಲ ಬಂದಂತಾಗಿದೆ.
ರೆಡ್ಡಿ-ರಾಮುಲು ಜೋಡಿ, ಲಾಡ್-ತುಕಾರಾಮ್ ಜೋಡಿಯ ಕಾರಣಕ್ಕಾಗಿ ಸಂಡೂರು ಹೈ-ವೋಲ್ಟೇಜ್ ಕಣವಾಗಿ ಗುರುತಿಸಿಕೊಂಡಿದೆ. ಕ್ಷೇತ್ರದಲ್ಲಿ, ಎಸ್‌ಟಿ ಸಮುದಾಯದ ಪ್ರಾಬಲ್ಯವಿದ್ದು, ದಲಿತರು, ಮುಸ್ಲಿಮರು, ಈಡಿಗರು, ಕುರುಬರ ಸಂಖ್ಯೆಯೂ ಗಣನೀಯವಾಗಿದೆ. ಈ ಸಮುದಾಯಗಳು ಅಭ್ಯರ್ಥಿಗಳ ಗೆಲುವು-ಸೋಲಿನಲ್ಲಿ ನಿರ್ಣಾಯಕ ಪಾತ್ರವಹಿಸಲಿವೆ. ಆ ಕಾರಣಕ್ಕಾಗಿಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಕ್ಷೇತ್ರದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಹಿಂದ ಮತಗಳನ್ನು ಒಗ್ಗೂಡಿಸಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಕಸರತ್ತು ನಡೆಸುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ಈ ದಿನ ವಿಶೇಷ | ಗೊಂಬೆಗಳ ನಾಡಾದ ಚನ್ನಪಟ್ಟಣದಲ್ಲಿ ಮಾಜಿ ನಟರ ಸ್ಟಾರ್ ವಾರ್
ಆದಾಗ್ಯೂ, ಕಾಂಗ್ರೆಸ್ ಒಳಗೆ ಅಪಸ್ವರ ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ, ಈವರೆಗೆ ಯಾವೊಬ್ಬ ಶಾಸಕನೂ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಜಿಲ್ಲೆಯವರೇ ಆದ ಸಂತೋಷ್ ಲಾಡ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಕೂಡ ನಾಮಪತ್ರ ಸಲ್ಲಿಸಿದ ಬಳಿಕ, ಕ್ಷೇತ್ರದತ್ತ ಇನ್ನೂ ಸುಳಿದಿಲ್ಲ. ಕುಟುಂಬ ರಾಜಕಾರಣದ ವಿರುದ್ಧ ಕಾರ್ಯಕರ್ತರೂ ಅಸಮಾಧಾನಗೊಂಡಿದ್ದಾರೆ. ಈ ಅಸಮಾಧಾನವನ್ನು ತಣಿಸಲು ಸಂತೋಷ್ ಲಾಡ್ ಅಖಾಡಕ್ಕೆ ಇಳಿಯಬೇಕಾದ ತುರ್ತು ಅಗತ್ಯವಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಒಳಗಿರುವ ಅಸಮಾಧಾನವನ್ನು ತಣಿಸಿದರೆ, ಕಾಂಗ್ರೆಸ್ ಶಾಸಕರನ್ನು ಪ್ರಚಾರಕ್ಕೆ ಇಳಿಸಿದರೆ, ಕಾಂಗ್ರೆಸ್‌ಗೆ ಗೆಲುವಿನ ಹಾದಿ ಸುಲಭವಾಗಬಹುದು. ಜಾತಿ ಲೆಕ್ಕಾಚಾರದ ಮತಗಳು ಕಾಂಗ್ರೆಸ್ ಅಭ್ಯರ್ಥಿಯ ಕೈಹಿಡಿಯಲಿವೆ. ಪರಿಶಿಷ್ಟ ಜಾತಿ ಹಾಗೂ ಲಿಂಗಾಯತ ಮತಗಳನ್ನ ಸೆಳೆಯುವಲ್ಲಿ ಸಚಿವ ಸಂತೋಷ್ ಲಾಡ್ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ಕಾಂಗ್ರೆಸ್‌ನಲ್ಲಿದೆ.
ಜೊತೆಗೆ, ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿ ಕಣದಲ್ಲಿರುವುದು ಹಾಗೂ ಗ್ಯಾರಂಟಿ ಯೋಜನೆಗಳು ಹೆಚ್ಚಾಗಿ ಮಹಿಳಾ ಮತದಾರರು ಕಾಂಗ್ರೆಸ್‌ನತ್ತ ಒಲವು ತೋರಿಸಲಿದ್ದಾರೆ ಎಂಬ ಭರವಸೆ ಕಾಂಗ್ರೆಸ್ ನಾಯಕರಲ್ಲಿದೆ.
ಇನ್ನು, ಬಿಜೆಪಿಯಲ್ಲಿಯೂ ಅಪಸ್ವರ ಸದ್ದು ಮಾಡುತ್ತಿದೆ. ಸ್ಥಳೀಯ ಕಾರ್ಯಕರ್ತರಿಗೆ ಟಿಕೆಟ್ ನೀಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಸಂಡೂರಿನಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಬಿಜೆಪಿ ಮುಖಂಡ ಕಾರ್ತಿಕ್ ಘೋರ್ಪಡೆ ಅವರು ಬಂಡಾಯದ ಬಾವುಟ ಬೀಸಿದ್ದಾರೆ. ಉಪಚುನಾವಣೆಯ ಪ್ರಚಾರದಿಂದ ದೂರ ಉಳಿದಿದ್ದಾರೆ. ಅಲ್ಲದೆ, ಜನಾರ್ದನ ರೆಡ್ಡಿಯವರ ಆಪ್ತ ದಿವಾಕರ್ ಕೂಡ ಅಸಮಾಧಾನಗೊಂಡಿದ್ದಾರೆ. ಚುನಾವಣಾ ಕಣದಲ್ಲಿ ಮೌನಕ್ಕೆ ಶರಣಾಗಿದ್ದಾರೆ.
ಆದಾಗ್ಯೂ, ಬಿಜೆಪಿಗರು ಕಾಂಗ್ರೆಸ್ ವಿರುದ್ಧ ಆಪಾದಿತ ಪ್ರಕರಣಗಳನ್ನೇ ದಾಳ ಮಾಡಿಕೊಂಡು, ಪ್ರಚಾರ ನಡೆಸುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಣ ದುರುಪಯೋಗ, ಬಳ್ಳಾರಿಯವರೇ ಆದ ಮಾಜಿ ಸಚಿವ ನಾಗೇಂದ್ರ ಜೈಲಿಗೆ ಹೋಗಿ ಬಂದದ್ದು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಎಫ್‌ಐಆರ್ ದಾಖಲಾಗಿರುವುದೇ ಬಿಜೆಪಿಗರಿಗೆ ಅಸ್ತ್ರವಾಗಿದೆ. ಇತ್ತ ಕಾಂಗ್ರೆಸ್ ಕೂಡ, ಜಿಲ್ಲೆಯನ್ನು ಗಣಿ ಕುಳಗಳು ಲೂಟಿ ಮಾಡಿ, ಜೈಲು ಸೇರಿದ್ದರ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದೆ.
ರಾಜ್ಯದಲ್ಲಿ ಅಧಿಕಾರ, ಹಾಲಿ ಸಂಸದ, ಜಿಲ್ಲೆಯವರೇ ಆದ ಸಚಿವ, ಅಹಿಂದ ಮತಗಳು – ಇಷ್ಟೆಲ್ಲ ಇರುವ ಸಂಡೂರನ್ನು ಗೆಲ್ಲುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಹೇಗಾದರೂ, ಕಾಂಗ್ರೆಸ್ ಭದ್ರಕೋಟೆಯನ್ನು ಒಡೆದು, ಕಮಲ ಅರಳಿಸುವುದು ಬಿಜೆಪಿಯ ಗುರಿಯಾಗಿದೆ. ಕ್ಷೇತ್ರದಲ್ಲಿ ಕಮಲ ಅರಳಿದರೆ ಬಿಜೆಪಿಗೆ ಐತಿಹಾಸಿಕ ಗೆಲುವಾಗಲಿದೆ. ಜೊತೆಗೆ, ರೆಡ್ಡಿಯ ಪ್ರಾಬಲ್ಯ ಮರುಕಳಿಸಲಿದೆ. ಸಂಸದ ತುಕಾರಾಮ್ ಮತ್ತು ಸಚಿವ ಸಂತೋಷ ಲಾಡ್‌ಗೆ ಮುಖಭಂಗವೂ ಆಗಲಿದೆ. ಹೀಗಾಗಿ, ಕ್ಷೇತ್ರದಲ್ಲಿ ಬಿಜೆಪಿ ನೆಲೆಯೂರಲು ಬಿಡಬಾರದೆಂಬ ಹಟ, ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಬೇಕೆಂಬ ಅನಿವಾರ್ಯ ತುಕಾರಾಮ್-ಸಂತೋಷ್ ಲಾಡ್ ಅವರಲ್ಲಿದೆ. ಅಂತಿಮವಾಗಿ, ಕಾಂಗ್ರೆಸ್ ತನ್ನ ಕೋಟೆಯನ್ನು ಭದ್ರವಾಗಿ ಉಳಿಸಿಕೊಳ್ಳುವುದೇ ಅಥವಾ ಬಿಜೆಪಿ ನೆಲೆ ಕಂಡುಕೊಳ್ಳುವುದೇ? ಚುನಾವಣಾ ಕಣ ಉತ್ತರಿಸಲಿದೆ.