ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಹಳ್ಳಿಯೊಂದರ ಸರಪಂಚ್ ಸಂತೋಷ್ ದೇಶ್‌ಮುಖ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಧನಂಜಯ್ ಅವರ ಆಪ್ತರು ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಕಾರಣದಿಂದಾಗಿ, ಅವರು ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ. ಇದೀಗ, ದೇಶ್‌ಮುಖ್ ಅವರ ಹತ್ಯೆ ಪ್ರಕರಣದ ತನಿಖಾ ವರದಿಯ ಕೆಲವು ಅಂಶಗಳು ಬಹಿರಂಗಗೊಂಡಿದ್ದು, ಹತ್ಯೆಯ ಸಂಗತಿಗಳು ಆಘಾತಕಾರಿಯಾಗಿವೆ.
2024ರ ಡಿಸೆಂಬರ್ 9ರಂದು ಸರಪಂಚ್ ಸಂತೋಷ್ ದೇಶ್‌ಮುಖ್ ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಹತ್ಯೆ ಪ್ರಕರಣದಲ್ಲಿ ಧನಂಜಯ್ ಮುಂಡೆ ಅವರ ಆಪ್ತ ವಾಲ್ಮಿಕ್ ಕರಡ್ ಪ್ರಮುಖ ಸೂತ್ರಧಾರಿ ಎಂಬುದು ತನಿಖೆಯಲ್ಲಿ ಗೊತ್ತಾಗಿದ್ದು, ಆತನನ್ನು ಬಂಧಿಸಲಾಗಿದೆ. ಆತನ ಬಂಧನದ ಬೆನ್ನಲ್ಲೇ ಧನಂಜಯ್ ರಾಜೀನಾಮೆ ನೀಡಿದ್ದಾರೆ.
ಬೀಡ್ ಜಿಲ್ಲೆಯಲ್ಲಿ ವಿಂಡ್ಮಿಲ್ ಎನರ್ಜಿ ಸಂಸ್ಥೆಯಿಂದ ಆರೋಪಿ ವಾಲ್ಮಿಕ್ ಕರಡ್ ಮತ್ತು ಇತರರು ನಿರಂತರವಾಗಿ ಸುಲಿಗೆ ಮಾಡುತ್ತಿದ್ದರು. ಅದನ್ನು ತಡೆಯಲು ಸಂತೋಷ್ ದೇಶ್‌ಮುಖ್ ಪ್ರಯತ್ನಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಕೊಲೆ ಮಾಡಲಾಗಿದೆ. ಸಂತೋಷ್ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಅವರ ದೇಹದ ಮೇಲೆ ದುಷ್ಕರ್ಮಿಗಳು ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದಾರೆ ಎಂಬುದು ಬಹಿರಂಗವಾಗಿರುವ ತನಿಖಾ ವರದಿಯ ಅಂಶಗಳಿಂದ ತಿಳಿದುಬಂದಿದೆ.
ತನಿಖಾ ಅಂಶಗಳು ಹೇಳುವುದೇನು?
ಮುಂಬೈ ಮೂಲದ ʼಅವಾಡಾʼ ಇಂಧನ ಕಂಪೆನಿಯು ಬೀಡ್ ಜಿಲ್ಲೆಯ ಮಸ್ಸಾಜೋಗ್ ಗ್ರಾಮದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಯನ್ನು ಆರಂಭಿಸಿತ್ತು. ಆ ಯೋಜನೆ ಆರಂಭವಾದ ಬಳಿಕ, ಸುತ್ತಲಿನ ಪ್ರದೇಶಗಳು ಆರ್ಥಿಕವಾಗಿ ಅಭಿವೃದ್ಧಿ ಕಾಣಲಾರಂಭಿಸಿದ್ದವು. ಇದನ್ನೇ ಬಳಸಿಕೊಂಡು ಕೆಲವು ಸ್ಥಳೀಯ ಪುಂಡರು ಹಣ ವಸೂಲಿ ಮತ್ತು ಅಪಹರಣ ಕೃತ್ಯಗಳಿಗೆ ಇಳಿದಿದ್ದರು. 2024ರ ಮೇ ತಿಂಗಳಿನಲ್ಲಿ ಧನಂಜಯ್ ಮುಂಡೆ ಅವರ ಆಪ್ತ ವಾಲ್ಮಿಕ್ ಕರಾಡ್ ಸೂಚನೆಯಂತೆ ಸುದರ್ಶನ್ ಘೂಲೆ ಎಂಬಾತ ʼಅವಾಡಾʼ ಕಂಪನಿಯ ಯೋಜನಾಧಿಕಾರಿ ಸುನೀಲ್ ಶಿಂಧೆ ಅವರನ್ನು ಅಪಹರಿಸಿದ್ದ. ಅಲ್ಲದೆ, 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಪುಂಡರ ದಾಂಧಲೆಯ ವಿರುದ್ಧ ಸಂತೋಷ್ ದೇಶ್‌ಮುಖ್ ಹೋರಾಟ ಆರಂಭಿಸಿದ್ದರು. ಪುಂಡರ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದರು.
ಅವರ ಹೋರಾಟ ತೀವ್ರಗೊಂಡಿತ್ತು. ಇದೇ ವೇಳೆ, ಯೋಜನಾಧಿಕಾರಿ ಸುನೀಲ್ ಶಿಂಧೆ ಅವರ ಕಚೇರಿಗೆ ನುಗ್ಗಿ ಪುಂಡರು ಹಲ್ಲೆ ನಡೆಸಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಸಂತೋಷ್ ಮತ್ತು ಇತರರು ಪುಂಡರನ್ನು ತಡೆದಿದ್ದರು. ತಮಗೆ ಅಡ್ಡಿಯಾಗಿದ್ದ ಸಂತೋಷ್ ಅವರನ್ನು ವಾಲ್ಮಿಕ್ ಕರಾಡ್‌ನ ಗ್ಯಾಂಗ್ ಡಿಸೆಂಬರ್ 9ರಂದು ಅಪಹರಿಸಿತ್ತು. ಅಂದು ಸಂಜೆ ದೈತ್ನಾ ಶಿವಾರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ದೇಶ್‌ಮುಖ್ ಪತ್ತೆಯಾಗಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
ಪೊಲೀಸರ ಪ್ರಕಾರ, ಸಂತೋಷ್ ದೇಶ್‌ಮುಖ್ ಅವರ ಮೇಲೆ ಗ್ಯಾಸ್ ಪೈಪ್, ಕಬ್ಬಿಣದ ರಾಡ್, ಮರದ ಕೋಲುಗಳು ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ. ಆ ಬಳಿಕ, ಕೊಲೆ ಮಾಡಲಾಗಿದೆ.
ಕೊಲೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು 1,200 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಕೊಲೆಗೂ ಮುನ್ನ ಸಂತೋಷ್‌ಗೆ ಚಿತ್ರಹಿಂಸೆ ನೀಡಿರುವ ಆರೋಪಿಗಳು, ಕೃತ್ಯದ 15 ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ. 8 ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ ಹಾಗೂ ಎರಡು ವೀಡಿಯೊ ಕರೆಗಳನ್ನು ಮಾಡಿದ್ದಾರೆ. ವಿಡಿಯೋಗಳಲ್ಲಿ, ಐವರು ಆರೋಪಿಗಳು ಸಂತೋಷ್ ಅವರನ್ನು ಬಿಳಿ ಪೈಪ್ ಮತ್ತು ದೊಣ್ಣೆಯಿಂದ ಥಳಿಸುತ್ತಿರುವುದು ಮತ್ತು ಕಾಲಿನಿಂದ ಒದ್ದಿದ್ದಾರೆ. ಸಂತೋಷ್ ಅವರನ್ನು ಅರೆಬೆತ್ತಲೆಗೊಳಿಸಿ, ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.