ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಅಲಕ್ಷ್ಯ ಮತ್ತು ಭ್ರಷ್ಟಾಚಾರಗಳ ಸ್ಫೋಟಕ ಸುದ್ದಿಗಳನ್ನು ಬಹಿರಂಗಪಡಿಸಿದ ಸತ್ಯಪಾಲ್ ಮಲಿಕ್ ಸಿಬಿಐ ನೋಟಿಸ್ ಪಡೆದಿದ್ದಾರೆ
ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ನಾಲ್ಕು ರಾಜ್ಯಗಳಿಗೆ ಬಿಜೆಪಿ ನೇಮಿತ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಇತ್ತೀಚೆಗೆ ರಾಷ್ಟ್ರಿಯ ಭದ್ರತೆ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರದ ಅಲಕ್ಷ್ಯ ಮತ್ತು ಭ್ರಷ್ಟಾಚಾರಗಳನ್ನು ಬಹಿರಂಗಪಡಿಸಿದ್ದರು. ಇದೀಗ ದೇಶದ ಉನ್ನತ ತನಿಖಾ ಸಂಸ್ಥೆ ಸಿಬಿಐ ಅವರನ್ನು ವಿಚಾರಣೆಗೆಂದು ನವದೆಹಲಿ ಕಚೇರಿಗೆ ಆಗಮಿಸುವಂತೆ ನೋಟಿಸ್ ಕಳುಹಿಸಿದೆ.
ಈ ಸುದ್ದಿ ಓದಿದ್ದೀರಾ? ಪುಲ್ವಾಮ ದಾಳಿ ದೋಷ ಮುಚ್ಚಿಟ್ಟು ಮೋದಿ ಚುನಾವಣಾ ಲಾಭ ಪಡೆದಿದ್ದರು: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್
ಇದೇ ಏಪ್ರಿಲ್ 28ರಂದು ನವದೆಹಲಿಯ ಸಿಬಿಐ ಮುಖ್ಯ ಕಚೇರಿಯಲ್ಲಿ ಸತ್ಯಪಾಲ್ ಮಲಿಕ್ ವಿಚಾರಣೆಗೆ ಹಾಜರಾಗಬೇಕಿದೆ.
ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕ ರಾಮ್ ಮಹಾದೇವ್ ಅವರು ಸತ್ಯಪಾಲ್ ಮಲಿಕ್ ಮೇಲೆ ಒತ್ತಡ ಹೇರಿದ್ದ ರಿಲಯನ್ಸ್ ಇನ್‌ಶೂರೆನ್ಸ್ ಮಂಜೂರಾತಿ ರದ್ದು ವಿಚಾರದ ಬಗ್ಗೆ ಅವರು ವಿಚಾರಣೆ ಎದುರಿಸಲಿದ್ದಾರೆ. ಮಲಿಕ್ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ಈ ಯೋಜನೆಯನ್ನು ರದ್ದು ಮಾಡಿದ್ದರು.
ಏಪ್ರಿಲ್ 14ರಂದು ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ರಿಲಯನ್ಸ್ ಇನ್‌ಶೂರೆನ್ಸ್ ಯೋಜನೆಯನ್ನು ಮಂಜೂರು ಮಾಡಲು ರಾಮ್ ಮಹಾದೇವ್ ತಮ್ಮ ಮೇಲೆ ಒತ್ತಡ ಹೇರಿರುವ ಬಗ್ಗೆ ‘ದಿ ವೈರ್’ ವೆಬ್‌ಸೈಟ್‌ಗೆ ತಿಳಿಸಿದ್ದರು.
“ರಾಮ್ ಮಹಾದೇವ್ ಅವರು ಸ್ವತಃ ಕಾಶ್ಮೀರಕ್ಕೆ ಬಂದು ನನ್ನನ್ನು ಭೇಟಿಯಾಗಿ ರಿಲಯನ್ಸ್ ಇನ್‌ಶೂರೆನ್ಸ್ ಪ್ರಸ್ತಾಪಿಸಿದ ಯೋಜನೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸಿದ್ದರು. ಯೋಜನೆಯನ್ನು ರದ್ದುಪಡಿಸಲಾಗಿದೆ ಮತ್ತು ಕಾಗದ ಪತ್ರಗಳು ಅಂತಿಮಗೊಂಡಿವೆ ಎಂದು ತಿಳಿಸಿದಾಗ ರಾಮ್ ಮಹಾದೇವ್ ನಿರಾಶರಾಗಿ ಮರಳಿದ್ದರು” ಎನ್ನುವ ವಿವರಗಳನ್ನು ಇತರ ಸಂದರ್ಶನಗಳಲ್ಲೂ ಸತ್ಯಪಾಲ್ ಮಲಿಕ್ ಬಹಿರಂಗಪಡಿಸಿದ್ದಾರೆ.
ಮಲಿಕ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ ನಂತರ ರಾಮ್ ಮಹಾದೇವ್ ಮಾನನಷ್ಟ ಮೊಕದ್ದಮೆಯನ್ನು ಹಾಕಿದ್ದಾರೆ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಹಲವು ಅರ್ಜಿಗಳಲ್ಲಿ ಸಿಬಿಐ ಸೇರಿದಂತೆ ಕೇಂದ್ರದ ಏಜೆನ್ಸಿಗಳ ಪಾತ್ರದ ಬಗ್ಗೆಯೂ ವಿಚಾರಣೆಯಾಗಬೇಕಿದೆ. ಪ್ರತೀ ಪ್ರಕರಣಗಳನ್ನು ಹಂತ ಹಂತವಾಗಿ ಪರಿಗಣಿಸಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.