- ಗ್ಯಾರಂಟಿ ಅನುಷ್ಠಾನಕ್ಕಾಗಿ ಹೋರಾಟಕ್ಕಿಳಿದ ಬಿಜೆಪಿ
- ವಿಧಾನಸೌಧದೆದುರು ಪ್ರತಿಭಟನೆಗೆ ಅಣಿಯಾದ ಬಿಎಸ್‌ವೈ
ಗ್ಯಾರಂಟಿ ಯೋಜನೆಗಳ ಜಾರಿಗೆ ಆಗ್ರಹಿಸಿ ಜೂನ್ 3 ರಿಂದ ಆರಂಭವಾಗಲಿರುವ ರಾಜ್ಯ ವಿಧಾನಸಭೆ ಅಧಿವೇಶನದ ಆರಂಭದಿಂದ ಅಂತ್ಯದವರೆಗೂ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಸಿ ಎಂ ಯಡಿಯೂರಪ್ಪ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಜಾರಿಯಾಗಲೇಬೇಕು. ಅದಾಗದಿದ್ದಲ್ಲಿ ಕಾರ್ಯಕರ್ತರ ಜೊತೆ ಕುಳಿತು ಸತ್ಯಾಗ್ರಹ ಮಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದಂತೆಯೇ 15 ಕೆಜಿ ಅಕ್ಕಿ ಕೊಡಬೇಕು. ನಿರುದ್ಯೋಗಿ ಪದವೀಧರ ಬ್ಯಾಂಕ್ ಖಾತೆಗೆ 3,000 ಹಣ ಕೊಡಬೇಕು. ಹಾಗೆಯೇ ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಲು ಅವಕಾಶ ಕೊಡದಂತೆ ಹೋರಾಟ ಮಾಡುವುದಾಗಿ ಹೇಳಿದರು.
ಅಧಿವೇಶನದ ಆರಂಭದ ದಿನದಿಂದ ನಾನು, ನಮ್ಮ ಕಾರ್ಯಕರ್ತರು ಸತ್ಯಾಗ್ರಹ ಮಾಡುತ್ತೇವೆ. ವಿಧಾನಸಭೆಯಲ್ಲಿ ನಮ್ಮ ಪಕ್ಷದ ಶಾಸಕರು ಇದಕ್ಕಾಗಿ ಹೋರಾಟ ಮಾಡಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಮಧ್ಯವರ್ತಿಗಳನ್ನು ದಾಟಿ ಫಲಾನುಭವಿಗಳಿಗೆ ಯೋಜನೆ ಲಾಭ ಸಿಗಲಿ: ಸಚಿವ ಡಾ. ಎಚ್ ಸಿ ಮಹದೇವಪ್ಪ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಪ್ರಚಂಡ ಗೆಲುವು ದಾಖಲಿಸಲಿದೆ. ಇದಕ್ಕೆ ಅಗತ್ಯವಿರುವ ಸಿದ್ದತೆ ಮಾಡಿಕೊಂಡಿದ್ದೇವೆ. ರಾಜ್ಯದಲ್ಲಿ 25-26 ಲೋಕಸಭಾ ಸ್ಥಾನ ಗೆಲ್ಲುವ ಮೂಲಕ ಕೇಂದ್ರದ ನಮ್ಮ ಸರ್ಕಾರವನ್ನು ಬಲಪಡಿಸಬೇಕಿದೆ ಎಂದು ಬಿಎಸ್ ವೈ ಹೇಳಿದರು.