ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷದಿಂದ ಬಂಧನದಲ್ಲಿದ್ದ ಸಾಮಾಜಿಕ ಹೋರಾಟಗಾರರಾದ ವರ್ನಾನ್ ಗೊನ್ಸಾಲ್ವಸ್ ಮತ್ತು ಅರುಣ್ ಫೆರೇರಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ(ಜುಲೈ 28) ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರ ಪೀಠ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ. ಇಬ್ಬರು ಮಹಾರಾಷ್ಟ್ರ ತೊರೆಯಬಾರದು ಹಾಗೂ ಪಾಸ್‌ಪೋರ್ಟ್‌ಗಳನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಬ್ಬರಿಗೂ ತಲಾ ಒಂದು ಮೊಬೈಲ್ ಬಳಸಲು ಅನುಮತಿಸಲಾಗಿದ್ದು, ಅವರು ಉಳಿದುಕೊಳ್ಳುವ ವಿಳಾಸದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಬೇಕು. ಇಬ್ಬರ ಫೋನ್ ಲೋಕೇಷನ್ ನಿತ್ಯವೂ ಆನ್ ಇರಬೇಕು, ವಾರಕ್ಕೊಮ್ಮೆ ತನಿಖಾಧಿಕಾರಿಗೆ ವರದಿ ನೀಡಬೇಕೆಂಬ ಷರತ್ತುಗಳನ್ನು ನ್ಯಾಯಾಧೀಶರು ವಿಧಿಸಿದ್ದಾರೆ.
ಭೀಮಾ ಕೋರೆಗಾಂವ್ – ಎಲ್ಗರ್ ಪರಿಷದ್ ಆರೋಪಿಗಳಾದ ವರ್ನಾನ್ ಗೊನ್ಸಾಲ್ವಸ್ ಮತ್ತು ಅರುಣ್ ಫೆರೇರಾ ಅವರು ಆಗಸ್ಟ್ 2018 ರಿಂದ ಐದು ವರ್ಷ ಸೆರೆವಾಸವನ್ನು ಅನುಭವಿಸಿದ್ದಾರೆ. ಇದನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಇಬ್ಬರ ವಿರುದ್ಧ ಯುಎಪಿಎ ಅಡಿಯಲ್ಲಿ ಆರೋಪ ದಾಖಲಾಗಿದೆ.
ಇಬ್ಬರ ಜಾಮೀನನ್ನು ಈ ಹಿಂದೆ ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಈ ಆದೇಶದ ವಿರುದ್ಧ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮೇಲ್ಜಾತಿ ಬಿಗಿಮುಷ್ಟಿ’ಯಲ್ಲಿ ಹೈಕೋರ್ಟುಗಳು-ಬಹುಜನರೇಕೆ ದೂರ ದೂರ?
2017ರ ಡಿಸೆಂಬರ್ 31 ರಂದು ಪುಣೆಯಲ್ಲಿ ಎಲ್ಗರ್ ಪರಿಷತ್ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಮಾವೋವಾದಿಗಳು ಹಣಕಾಸಿನ ಬೆಂಬಲ ನೀಡಿದ್ದಾರೆ ಎಂದು ಪುಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಅಲ್ಲದೆ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದನಾಕಾರಿ ಭಾಷಣಗಳು ಮರುದಿನ ಪುಣೆಯ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ಆರೋಪಿಸಿದ್ದಾರೆ.