ಜಾತ್ಯತೀತತೆಯು ಕಾಂಗ್ರೆಸ್‌ನ ಮೂಲ ತತ್ವಗಳಲ್ಲಿ ಒಂದಾಗಿದೆ. ಪಕ್ಷವು ಅದರಿಂದ ದೂರ ಸರಿಯಬಾರದು, ವಿಮುಖವಾಗಬಾರದು. ಎಲ್ಲರ ಧಾರ್ಮಿಕ ನಂಬಿಕೆಗಳಿಗೂ ಸಮಾನ ಗೌರವ ಸಿಗಬೇಕು ಎಂದು ವಿಪಕ್ಷ ನಾಯಕ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನಕ್ಕೂ ಮುನ್ನ ನಡೆದ ಕಾಂಗ್ರೆಸ್ ಸಿಡಬ್ಲ್ಯೂಸಿ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದು, ಪಕ್ಷದ ನಾಯಕರಿಗೆ ಪಕ್ಷದ ಮೂಲ ಸಿದ್ದಾಂತಗಳ ಕುರಿತು ವಿವರಿಸಿದ್ದಾರೆ. ಬಿಜೆಪಿಯ ಕೋಮು ಧ್ರುವೀಕರಣವನ್ನು ಎದುರಿಸಲು ಪಕ್ಷವು ಏನೆಲ್ಲ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ.
“ಕಾಂಗ್ರೆಸ್ ಅನ್ನು ‘ಒಂದು ಸಮುದಾಯ/ಧರ್ಮ’ದ ಪಕ್ಷವೆಂದು ನೋಡಲಾಗುವುದಿಲ್ಲ. ಒಬ್ಬ ವ್ಯಕ್ತಿಯ ಧಾರ್ಮಿಕ ನಂಬಿಕೆಯ ಕಾರಣಕ್ಕಾಗಿ ಅವರ ಮೇಲೆ ದಾಳಿ ನಡೆದರೆ, ನಾವು ಅದನ್ನು ವಿರೋಧಿಸಬೇಕು. ಪ್ರತಿಯೊಬ್ಬರ ಧಾರ್ಮಿಕ ನಂಬಿಕೆಯನ್ನು ಗೌರವಿಸುವ ಬಗ್ಗೆ ಪಕ್ಷದ ನಾಯಕರಿಗೆ ಸ್ಪಷ್ಟತೆ ಇರಬೇಕು” ಎಂದು ತಿಳಿಸಿದ್ದಾರೆ.
“ಜನರ ಹಕ್ಕುಗಳಿಗಾಗಿ ಕಾಂಗ್ರೆಸ್ ಪ್ರಜಾಸತ್ತಾತ್ಮಕವಾಗಿ ಹೋರಾಡುವುದನ್ನು ಮುಂದುವರಿಸುತ್ತದೆ:” ಎಂದು ಹೇಳಿದ್ದಾರೆ.
“1991ರ ನಂತರ ಕಾಂಗ್ರೆಸ್ ಜನಸಂಖ್ಯೆಯ ಸರಿಸುಮಾರು 50% ರಷ್ಟಿರುವ ಇತರ ಹಿಂದುಳಿದ ವರ್ಗಗಳ (ಒಬಿಸಿ) ಬೆಂಬಲವನ್ನು ಕಳೆದುಕೊಂಡಿದೆ. ದಲಿತರು (22%) ಮತ್ತು ಆದಿವಾಸಿಗಳು (22%) ಹಾಗೂ ಅಲ್ಪಸಂಖ್ಯಾತರು (15%) ಹಾಗೂ ಒಬಿಸಿಗಳನ್ನು ನಿರ್ಲಕ್ಷಿಸುವುದರಿಂದ ದೇಶವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯದ ಮೇಲೆ ಪಕ್ಷದ ಗಮನವು ಹೆಚ್ಚಿರಬೇಕು” ಎಂದು ರಾಹುಲ್ ಗಾಂಧಿ ಒತ್ತಿ ಹೇಳಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆಯು ಬಿಜೆಪಿಯ ‘ಧ್ರುವೀಕರಣ ರಾಜಕಾರಣ’ದ ಭಾಗವಾಗಿದೆ. ಎಂಎಸ್‌ಪಿಗಾಗನ ರೈತರ ಹೋರಾಟ, ಮಹಿಳೆಯರ ಸಬಲೀಕರಣ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಸುಂಕಗಳು, ಪ್ಯಾಲೆಸ್ಟೈನ್-ಇಸ್ರೇಲ್ ಸಂಘರ್ಷದಲ್ಲಿ ಅಮಾಯಕರ ಸಾವುಗಳು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು, ಚೀನಾ ಜೊತೆಗಿನ ಸಂಘರ್ಷಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ದೌರ್ಬಲ್ಯ ಮತ್ತು ವಿಫಲತೆಗಳ ಬಗ್ಗೆ ಕಾಂಗ್ರೆಸ್ ಅಧಿವೇಶನದಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.