ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಭ್ಯರ್ಥಿಗಳು. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿಯನ್ನ ಸೋಲಿಸಿ, ವಾಪಸ್ ಚನ್ನಪಟ್ಟಣಕ್ಕೆ ಕಳುಹಿಸಿ ಎಂದು ಮಂಡ್ಯ ಕ್ಷೇತ್ರದ ಮತದಾರರಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಕೆ.ಆರ್ ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. “ಈಗ ಎ ಟೀಮ್, ಬಿ ಟೀಮ್ ಅಂತ ಇಲ್ಲ. ಈಗಿರುವುದು ಬಿಜೆಪಿ-ಜೆಡಿಎಸ್ ಪಾರ್ಟ್‌ನರ್ಸ್” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಜಾತಿ-ಧರ್ಮದ ಮೇಲೆ ನಿಂತಿಲ್ಲ. ನಾವು ಭ್ರಷ್ಟಾಚಾರ ತೆಗೆಯಬೇಕೆಂದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ನಮ್ಮ ಯೋಜನೆಯಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಹೆಣ್ಣು ಮಕ್ಕಳನ್ನ ಅವಮಾನಿಸಿದ್ದಾರೆ” ಎಂದು ಕಿಡಿಕಾರಿದರು.
“ಮೋದಿ ಎಲ್ಲರ ಖಾತೆಗೂ 15 ಲಕ್ಷ ಹಣ ಹಾಕ್ತೇವೆ ಅಂದಿದ್ದರು. ಯಾರಿಗಾದರೂ ಬಂತಾ? ರೈತರ ಆದಾಯ ಡಬಲ್ ಆಯ್ತಾ? ಯುವಜನರಿಗೆ ಕೆಲಸ ಸಿಕ್ತಾ” ಎಂದು ಪ್ರಶ್ನಿಸಿದರು.