ಸಂದೇಶ್‌ಖಾಲಿ ಪ್ರಕರಣದ ಆರೋಪಿ, ಟಿಎಂಸಿ ಪ್ರಬಲ ಮುಖಂಡ ಷಹಜಹಾನ್ ಶೇಖ್ ಪರ ವಕೀಲರ ಕುರಿತು ಕೊಲ್ಕತ್ತಾ ಹೈಕೋರ್ಟ್ ಕಟುವಾದ ಮಾತುಗಳನ್ನಾಡಿದೆ. ಶೇಖ್ ಅವರಿಗೆ ಜಾಮೀನು ನೀಡುವಂತೆ ವಕೀಲ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ನೇತೃತ್ವದ ಪೀಠವು ತಿರಸ್ಕರಿಸಿದೆ. ಅಲ್ಲದೆ, ‘ಶೇಖ್ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲ’ ಎಂದು ಹೇಳಿದೆ.
ಕಳೆದ ತಿಂಗಳು, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡದ ಮೇಲೆ ಗುಂಪು ದಾಳಿಗೆ ನಡೆಸಿದ್ದ ಪ್ರಕರಣದಲ್ಲಿ ಶೇಖ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಅಲ್ಲದೆ, ಶೇಖ್ ವಿರುದ್ಧ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಪ್ರದೇಶದ ಆದಿವಾಸಿ, ಬುಡಕಟ್ಟು ಜನರು ಸುಮಾರು 100ಕ್ಕೂ ಹೆಚ್ಚು ದೂರುಗಳನ್ನ ದಾಖಲಿಸಿದ್ದಾರೆ. ಶೇಖ್ ಮತ್ತು ಸಹಚರರು ತಮ್ಮ ಭೂಮಿಯನ್ನ ಬಲವಂತವಾಗಿ ಕಸಿದುಕೊಂಡಿದ್ದಾರೆ. ಮನರೇಗಾ ಅಡಿಯಲ್ಲಿ ತಮ್ಮ ದುಡಿಮೆಯ ಹಣವನ್ನೂ ಕಿತ್ತುಕೊಂಡಿದ್ದಾರೆ. ಸಮುದಾಯದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳನ್ನ ಎಸಗಿದ್ದಾರೆ ಎಂದು ದೂರುಗಳಲ್ಲಿ ಆರೋಪಿಸಿದ್ದಾರೆ.
ಕಳೆದ 55 ದಿನಗಳಿಂದ ತಲೆ ಮರೆಸಿಕೊಂಡಿದ್ದ ಶೇಖ್ ಅವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಗುರುವಾರ, ಶೇಖ್ ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿಗಳು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದ್ದು, ಅಂದು ಬನ್ನಿ ಎಂದಿದ್ದಾರೆ.
“ಮಿಸ್ಟರ್ ಕೌನ್ಸಿಲ್ (ವಕೀಲ), ಈ ವ್ಯಕ್ತಿಯ -ಶೇಖ್ – ವಿರುದ್ಧ ಸುಮಾರು 43 ಪ್ರಕರಣಗಳಿವೆ. ಗಮನದಲ್ಲಿಟ್ಟುಕೊಳ್ಳಿ, ಈಗ ಮುಂದಿನ 10 ವರ್ಷಗಳವರೆಗೆ, ಈ ವ್ಯಕ್ತಿ ನಿಮ್ಮನ್ನು ಬ್ಯುಸಿಯಾಗಿರಿಸುತ್ತಾರೆ. ಮುಂದಿನ 10 ವರ್ಷಗಳವರೆಗೆ ನೀವು ಅವರ ಎಲ್ಲ ಪ್ರಕರಣಗಳನ್ನು ನಿರ್ವಹಿಸಬೇಕಾಗುತ್ತದೆ,” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
“ಆ ವ್ಯಕ್ತಿಯ ಬಗ್ಗೆ ನಮಗೆ ಯಾವುದೇ ಸಹಾನುಭೂತಿ ಇಲ್ಲ. ದಯವಿಟ್ಟು ಸೋಮವಾರ ಬನ್ನಿ, ಈಗ ಅಲ್ಲ” ಎಂದು ಪೀಠ ಹೇಳಿದೆ.