- ಉದ್ಯೊಗ ಹಗರಣದಲ್ಲಿ ಮೇ 31 ರಂದು ಸೆಂಥಿಲ್ ಬಾಲಾಜಿ ಬಂಧನ
- ಜೂನ್ 23 ರಂದು ಸೆಂಥಿಲ್‌ರನ್ನು ಹಾಜರುಪಡಿಸುವಂತೆ ಸೂಚನೆ
ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧನ ಹಾಗೂ ಸಚಿವರಾಗಿ ಮುಂದುವರಿಯುವ ವಿಚಾರ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ರಾಜ್ಯಪಾಲ ಆರ್.ಎನ್.ರವಿ ಅವರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೆಂಥಿಲ್ ಅವರ ಖಾತೆಗಳ ಮರುಹಂಚಿಕೆ ಕುರಿತು ಗುರುವಾರ (ಜೂನ್ 15) ಆರ್.ಎನ್.ರವಿ ಅವರಿಗೆ ಶಿಫಾರಸು ಮಾಡಿದ್ದರು.
“ಸೆಂಥಿಲ್ ಬಾಲಾಜಿ ಅವರು ಅಪರಾಧ ಮೊಕದ್ದಮೆಗಳನ್ನು ಎದುರಿಸುತ್ತಿದ್ದು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವುದರಿಂದ ಇನ್ನು ಮುಂದೆ ಸಂಪುಟದ ಸಚಿವರಾಗಿ ಮುಂದುವರಿಯಲು ರಾಜ್ಯಪಾಲ ರವಿಯವರು ಒಪ್ಪಿಗೆ ನೀಡಿಲ್ಲ” ಎಂದು ರಾಜಭವನ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಇದಕ್ಕೆ ಕಿಡಿಕಾರಿರುವ ಡಿಎಂಕೆ, “ರಾಜ್ಯಪಾಲ ರವಿ ಅವರು ಬಿಜೆಪಿಯ ಒಬ್ಬ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ” ಎಂದು ಹೇಳಿದೆ.
“ವಿದ್ಯುತ್, ಇಂಧನ ಅಭಿವೃದ್ಧಿ ಖಾತೆಗಳನ್ನು ಹಣಕಾಸು ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ತಂಗಂ ತೆನ್ನರಸು ಮತ್ತು ಅಬಕಾರಿ ಇಲಾಖೆಯನ್ನು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಎಸ್.ಮುತ್ತುಸ್ವಾಮಿ ಅವರಿಗೆ ಮರು ಹಂಚಿಕೆ ಮಾಡುವ ಮುಖ್ಯಮಂತ್ರಿ ಶಿಫಾರಸನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ” ಎಂದು ಪ್ರಕಟಣೆ ತಿಳಿಸಿದೆ.
ಸ್ಟಾಲಿನ್ ಸರ್ಕಾರ ಕಳುಹಿಸಿದ ಅನೇಕ ಮಸೂದೆಗಳನ್ನು ಅಂಗೀಕರಿಸಲು ರಾಜ್ಯಪಾಲ ರವಿ ಅವರು ವಿಳಂಬ ಮಾಡುತ್ತಿರುವುದು ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಆಂತರಿಕ ತಿಕ್ಕಾಟಕ್ಕೆ ಕಾರಣವಾಗಿದೆ.
ಸೆಂಥಿಲ್ ಅವರನ್ನು ಉದ್ಯೋಗ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಮೇ 31 ರಂದು ಬಂಧಿಸಿದೆ. ಸೆಂಥಿಲ್ ಅವರನ್ನು ಜೂನ್ 28ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.
ಈ ಸುದ್ದಿ ಓದಿದ್ದೀರಾ? ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಗೆ ಆರೋಪಿಯೊಂದಿಗೆ ರಾಜಿಗೆ ಮುಂದಾದ ಗುಜರಾತ್ ಹೈಕೋರ್ಟ್ ನ್ಯಾಯಾಧೀಶ
ಸೆಂಥಿಲ್ ಬಾಲಾಜಿ ಅವರು ಸದ್ಯ ಶಸ್ತ್ರಚಿಕಿತ್ಸೆ ಸಂಬಂಧ ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿಯೇ ಸೆಂಥಿಲ್ ವಿಚಾರಣೆ ನಡೆಸಲು ಚೆನ್ನೈ ನ್ಯಾಯಾಲಯ 8 ದಿನಗಳ ಕಾಲಾವಕಾಶ ನೀಡಿದೆ.
ಸೆಂಥಿಲ್ ಅವರನ್ನು ಜೂನ್ 23 ರಂದು ಹಾಜರುಪಡಿಸಲು ನ್ಯಾಯಾಲಯ ಸೂಚಿಸಿದೆ.