ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ಮೂಲಕ 16ನೇ ವಿಧಾನಸಭೆಯ ಮೊದಲ ಅಧಿವೇಶನಕ್ಕೆ ಸೋಮವಾರ ಚಾಲನೆ ನೀಡಿದ್ದಾರೆ.
“ಬಸವಣ್ಣನ ತತ್ವದಡಿ ರಾಜ್ಯ ಸರ್ಕಾರ ನಡೆಯುತ್ತಿದೆ. ಸರ್ಕಾರ ಎಲ್ಲ ಸಮುದಾಯಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ತತ್ವದಡಿ ಕೆಲಸ ಮಾಡುತ್ತಿದೆ” ಎಂದು ಗೆಹಲೋತ್ ತಿಳಿಸಿದರು.
“ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರವು ಹಸಿವು ಮುಕ್ತ ರಾಜ್ಯ ನಿರ್ಮಾಣದ ಗುರಿ ಹೊಂದಿದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು ಮುಂತಾದವರ ಹಸಿವು ತಣಿಸಲು ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಹಣ ನೀಡಲಾಗುತ್ತೆ. ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ. ಮತ್ತು ನಿರುದ್ಯೋಗಿ ಡಿಪ್ಲೋಮಾದವರಿಗೆ ತಿಂಗಳಿಗೆ 1,500 ರೂ. ಹಾಕಲಾಗುತ್ತೆ” ಎಂದರು.
“ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಕೊಡಲಾಗುತ್ತೆ. ಈ ಯೋಜನೆ ಸುಮಾರು 2.14 ಕೋಟಿ ಕುಟುಂಬಕ್ಕೆ ಆಧಾರವಾಗಲಿದೆ. ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಾಕಲಾಗುತ್ತೆ” ಎಂದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮನುಷ್ಯಪ್ರೀತಿ ಹಂಚುವ `ಮುಸ್ತಾಫಾ’ ಈ ಕಾಲದ ಅಗತ್ಯ
“ಆಡಳಿತವನ್ನು ಪವಿತ್ರ ಕರ್ತವ್ಯ ಎಂದು ನನ್ನ ಸರ್ಕಾರ ಪರಿಗಣಿಸುತ್ತೆ. ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ಸರ್ಕಾರ ನಿಲ್ಲುತ್ತದೆ. ಸರ್ಕಾರ ಆಧುನಿಕ ಕರ್ನಾಟಕ ನಿರ್ಮಾಣ ಮಾಡಲು ಉದ್ದೇಶಿಸಿದೆ. ಶಾಲಾ ಶಿಕ್ಷಣವು ಸಮಾಜದ ಅಡಿಪಾಯವೆಂದು ಗುರುತಿಸಲ್ಪಟ್ಟಿದೆ. ಪ್ರತಿ ಮಗುವಿನ ಮೂಲಭೂತ ಹಕ್ಕನ್ನು ಸಂರಕ್ಷಿಸಲು ಸರ್ಕಾರ ಬದ್ಧ” ಎಂದು ಹೇಳಿದರು.
“ಶಿಕ್ಷಣ ಜತೆಗೆ ಮಕ್ಕಳ ಆರೋಗ್ಯ ರಕ್ಷಣೆಯೂ ಸರ್ಕಾರದ ಜವಾಬ್ದಾರಿ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ನಾವು ಸಿದ್ಧರಾಗಿದ್ದೇವೆ. ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತೆ. ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯ, ಶಿಕ್ಷಣ ಸೇವೆ ಒದಗಿಸಲು ನೆರವು ಎಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣದಲ್ಲಿ ತಿಳಿಸಿದರು.