- 22 ಗ್ರಾಮಗಳಿಗೆ ಟ್ಯಾಂಕರ್ ಮೂಲಕ, 16 ಗ್ರಾಮಗಳಿಗೆ ಬಾಡಿಗೆ ಆಧಾರದ ಮೇಲೆ ನೀರು
- 142 ಖಾಸಗಿ ಕೊಳವೆಬಾವಿ ಬಾಡಿಗೆ, ಈ ಮೂಲಕ 130 ಗ್ರಾಮಗಳಿಗೆ ನೀರು ಸರಬರಾಜು
ರಾಜ್ಯದ 36 ತಾಲ್ಲೂಕುಗಳ 100 ಗ್ರಾಮ ಪಂಚಾಯತಿಗಳಲ್ಲಿನ 152 ಗ್ರಾಮಗಳು ಕುಡಿಯುವ ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ರಾಜ್ಯದಲ್ಲಿನ ಸದ್ಯದ ಗ್ರಾಮೀಣ ನೀರು ಸರಬರಾಜು ಸ್ಥಿತಿಯನ್ನು ವಿಮರ್ಶಿಸಿ ಮಾಹಿತಿ ಹಂಚಿಕೊಂಡಿದ್ದು, ತೊಂದರೆಗೀಡಾಗಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
“ರಾಜ್ಯದ ಬಹುಪಾಲು ತಾಲ್ಲೂಕುಗಳಲ್ಲಿ ಮಳೆ ಕೊರತೆಯಾಗಿದ್ದು ಬರ ಸ್ಥಿತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ನೀರು ಸರಬರಾಜು ಪರಿಸ್ಥಿತಿಯ ಮೇಲೆ ತೀವ್ರವಾಗಿ ನಿಗಾ ಇರಿಸಲಾಗಿದೆ. 22 ಗ್ರಾಮಗಳಿಗೆ ಇಲಾಖೆಯ ಟ್ಯಾಂಕರ್ ಹಾಗೂ 16 ಗ್ರಾಮಗಳಿಗೆ ಬಾಡಿಗೆ ಆಧಾರದ ಮೇಲೆ ಪಡೆಯಲಾಗಿರುವ ಟ್ಯಾಂಕರ್ ಬಳಸಲಾಗುತ್ತಿದ್ದು, ಪ್ರತಿ ಟ್ಯಾಂಕರ್ ಸರಾಸರಿ ಪ್ರತಿ ನಿತ್ಯ 17 ಟ್ರಿಪ್ ಮೂಲಕ ನೀರು ಸರಬರಾಜು ಮಾಡುತ್ತಿವೆ. 142 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದ್ದು, ಈ ಮೂಲಕ 130 ಗ್ರಾಮಗಳಿಗೆ ನೀರು ಸರಬರಾಜಾಗುತ್ತಿದೆ” ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ವ್ಯಾಖ್ಯಾನ ಬದಲಿಸಿದ ಕಾಂಚಾಣ
ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಯ ಮೇಲೆ ನಿಗಾ ಇರಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ಜಿಲ್ಲೆಯ ಅಧಿಕಾರಿಗಳು ಕಳುಹಿಸುವ ಮಾಹಿತಿಯನ್ನು ಆಧರಿಸಿ ವಿಮರ್ಶೆ ಸಭೆ ನಡೆಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಗ್ರಾಮೀಣ ನೀರು ಸರಬರಾಜು ಮಾಡುವಲ್ಲಿ ತೊಂದರೆಯುಂಟಾದಲ್ಲಿ ತಕ್ಷಣವೇ ತಮ್ಮ ಗಮನಕ್ಕೆ ತರಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.