ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ ಯೋಜನೆ’ ಅಸಲಿ ಹಿಂದುತ್ವಕ್ಕೆ ಶಕ್ತಿ ತುಂಬಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸ ಬಳಿಕ ಹಲವಾರು ರೀತಿಯ ಟೀಕೆಗಳು ವ್ಯಕ್ತವಾಗುತ್ತಿವೆ. ಹಳೆದ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕೆಲವು ನಕಲಿ ಟ್ರೋಲ್ ಮಾಡುತ್ತಿದ್ದಾರೆ. ಈ ಟ್ರೋಲ್‌ಗಳ ಅಮಲಿಗೆ ಬಿದ್ದು, ತಮ್ಮ ಮನೆಗೆ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ಕಲ್ಪಿಸಿರುವುದನ್ನು ಅದೇ ಮನೆಯ ಪುರುಷರೂ ವಿರೋಧಿಸುತ್ತಿದ್ದಾರೆ.
ಇದೆಲ್ಲದರ ನಡುವೆ, ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಆದಾಯ ಹೆಚ್ಚಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಅಲ್ಲದೆ, ಯೋಜನೆಯಿಂದಾಗಿ ನಾನಾ ದೇವಾಲಯಗಳಿಗೆ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ದೇವಾಲಯಗಳೂ ಶ್ರೀಮಂತವಾಗುತ್ತಿವೆ ಎಂದು ತಿಳಿದಬಂದಿದೆ.
ಈ ನಡುವೆ ಯೋಜನೆ ಬಗ್ಗೆ ಟ್ವೀಟ್ ಮಾಡಿರುವ ರಾಮಲಿಂಗಾ ರೆಡ್ಡಿ, “ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದ ಎಲ್ಲ ಹಿಂದೂ ದೇಗುಲಗಳು, ಪುಣ್ಯ ಕ್ಷೇತ್ರಗಳು ತುಂಬಿ ತುಳುಕುತ್ತಿವೆ” ಎಂದಿದ್ದಾರೆ.
“ನಮ್ಮ ದೇವರನ್ನು ಪೂಜಿಸಿ, ಪ್ರೀತಿಸುವುದು, ಇತರ ಧರ್ಮೀಯರನ್ನು ಗೌರವಿಸುವವನೇ ನಿಜವಾದ ಹಿಂದು. ಇದು ಈಗ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿದೆ. ನೈಜ ಹಿಂದುಗಳ ರಕ್ಷಣೆ, ಅಭಿವೃದ್ಧಿಗೆ ಕಾಂಗ್ರೆಸ್ ಸದಾ ಬದ್ಧ”’ ಎಂದು ಹೇಳಿದ್ದಾರೆ.