ಮಹಿಳೆಯರು ಎಂದರೆ ಮಹಿಳೆಯರೇ. ನೋಡಿದ ತಕ್ಷಣ ಮಹಿಳೆಯರು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಆದರೂ, ಆ ದಾಖಲೆ ತೋರಿಸಬೇಕು, ಈ ದಾಖಲೆ ತೋರಿಸಬೇಕು ಎನ್ನುವ ಕಂಡೀಷನ್ ಏಕೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಪ್ರಶ್ನಿಸಿದರು.
ದಾವಣಗೆರೆಯ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿರುವ ತಾತ್ಕಾಲಿಕ ಸಾರಿಗೆ ಬಸ್‌ನಿಲ್ದಾಣದಲ್ಲಿ ಭಾನುವಾರ ನಡೆದ ಶಕ್ತಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸರ್ಕಾರ ಸಾಮಾನ್ಯ, ವೇಗದೂತ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಣಿಸಲು ಅವಕಾಶ ಮಾಡಿಕೊಟ್ಟಿರುವಾಗ ಯಾಕೆ ಇಲ್ಲದ ಕಂಡೀಷನ್ ಹಾಕಲಾಗುತ್ತಿದೆ ಎಂಬುದು ಈಗಲೂ ಅರ್ಥವಾಗುತ್ತಿಲ್ಲ” ಎಂದರು.
ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮಧ್ಯಪ್ರವೇಶಿಸಿ, “ಹೊರ ರಾಜ್ಯದವರಾ ಅಥವಾ ನಮ್ಮ ರಾಜ್ಯದವರಾ ಎಂದು ತಿಳಿದುಕೊಳ್ಳಲು ಈ ಕಂಡೀಷನ್ ಹಾಕಲಾಗಿದೆ” ಎಂದು ಸಮಜಾಯಿಷಿ ನೀಡಿದರು.
ಹೊರ ರಾಜ್ಯದ ಮಹಿಳೆಯರಿಗೂ ಸಿಗಲಿ ಯೋಜನೆ
“ಯಾರೇ ಮಹಿಳೆಯರಾಗಲಿ ಅವರಿಗೆ ತೊಂದರೆ ಆಗದಂತೆ ಸರಾಗ ಮತ್ತು ಸುರಕ್ಷಿತವಾಗಿ ಪ್ರಯಾಣಕ್ಕೆ ಸಾರಿಗೆ ಸಂಸ್ಥೆಯವರು ಅನುಕೂಲ ಮಾಡಿಕೊಡಬೇಕು. ಹೊರ ರಾಜ್ಯದವರಿಗೂ ಉಚಿತವಾಗಿ ಬಸ್‌ಗಳಲ್ಲಿ ಸಂಚರಿಸುವ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.