ಶರದ್ ಪವಾರ್ ಅವರು 2019 ರಲ್ಲಿ ಬಿಜೆಪಿ – ಎನ್‌ಸಿಪಿ ಸರ್ಕಾರ ರಚಿಸಲು ಮೊದಲು ಒಪ್ಪಿಗೆ ನೀಡಿ 3-4 ದಿನಗಳ ನಂತರ ಹಿಂದೆ ಸರಿಯುವ ಮೂಲಕ ಇಬ್ಬಗೆ ನೀತಿ ಅನುಸರಿಸಿದ್ದರು. ಹೀಗಾಗಿ ಅಜಿತ್ ಪವಾರ್ ಅವರು ಆಗ ಪ್ರಮಾಣ ವಚನ ಸ್ವೀಕರಿಸದೆ ಬೇರೆ ದಾರಿಯಿರಲಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 2019ರಲ್ಲಿ ಅಜಿತ್ ಪವಾರ್ ಅವರು ಬಿಜೆಪಿ ಸರ್ಕಾರದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಗೆಯನ್ನು ವಿವರಿಸಿದ್ದಾರೆ. ಆ ಸಂದರ್ಭದಲ್ಲಿ ಶರದ್ ಪವಾರ್ ಸೇರಿದಂತೆ ಎನ್‌ಸಿಪಿಯ ಕೆಲವು ನಾಯಕರು ಬಿಜೆಪಿಯನ್ನು ಸಂಪರ್ಕಿಸಿದ್ದರು. ನಮ್ಮ ಪಕ್ಷವು ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಬೆಂಬಲ ನೀಡುತ್ತದೆ ಎಂದಿದ್ದರು ಎಂದು ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.
“2019ರಲ್ಲಿ ಶರದ್ ಪವಾರ್ ಅವರೊಂದಿಗೆ ಸಭೆ ನಡೆದ ನಂತರ ಕೆಲವೊಂದು ಕಾರ್ಯತಂತ್ರದ ಜೊತೆಗೆ ಸರ್ಕಾರ ರಚಿಸಲಾಗುವುದೆಂದು ನಿರ್ಧರಿಸಲಾಯಿತು. ನನಗೆ ಮತ್ತು ಅಜಿತ್ ಪವಾರ್ ಅವರಿಗೆ ಸರ್ಕಾರ ರಚಿಸಲು ಎಲ್ಲ ಅಧಿಕಾರವನ್ನು ನೀಡಲಾಯಿತು. ಅದರಂತೆ ನಾವು ಸಿದ್ಧತೆಗಳನ್ನು ನಡೆಸಿದ್ದೆವು. ಆದರೆ ಪ್ರಮಾಣ ವಚನಕ್ಕೆ 3-4 ದಿನಗಳ ಮೊದಲು ಶರದ್ ಪವಾರ್ ಬೆಂಬಲವನ್ನು ಹಿಂತೆಗೆದುಕೊಂಡರು. ಆ ಕಾರಣದಿಂದ ಎನ್‌ಸಿಪಿಯ ಶಾಸಕರ ಬೆಂಬಲವಿಲ್ಲದಿದ್ದರೂ ಅಜಿತ್ ಪವಾರ್ ಅವರು ನಮ್ಮೊಂದಿಗೆ ಪ್ರಮಾಣ ವಚನ ಸ್ವೀಕರಿಸದೆ ಬೇರೆ ವಿಧಿಯಿರಲಿಲ್ಲ. ಅಲ್ಲದೆ ಸ್ವೀಕಾರ ಸಮಾರಂಭಕ್ಕೆ ಶರದ್ ಪವಾರ್ ಕೂಡ ಬರುತ್ತಾರೆಂದು ಅಜಿತ್ ಹೇಳಿದ್ದರು” ಎಂದು ದೇವೇಂದ್ರ ಫಡ್ನವಿಸ್ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಂದ್ರಯಾನ 3 ದಿನಾಂಕ ಘೋಷಿಸಿದ ಇಸ್ರೋ
“ಶರದ್ ಪವಾರ್ ಅವರೊಂದಿಗಿನ ಚರ್ಚೆಯೊಂದಿಗೆ ಸರ್ಕಾರ ರಚನೆಯ ಪ್ರಕ್ರಿಯೆ ಪ್ರಾರಂಭವಾಯಿತು. ಉದ್ಧವ್ ಠಾಕ್ರೆ ಕೂಡ ಮೈತ್ರಿ ಮುರಿದುಕೊಂಡು ಬೆನ್ನಿಗೆ ಚೂರಿ ಹಾಕಿದರು. ಶರದ್ ಪವಾರ್ ಕೂಡ ಇಬ್ಬಗೆ ನೀತಿ ಅನುಸರಿಸಿದರು” ಎಂದು ತಿಳಿಸಿದ್ದಾರೆ.
“ಉಪಮುಖ್ಯಮಂತ್ರಿಯಾಗಿರುವುದು ಕೂಡ ನನಗೆ ಖಂಡಿತಾ ಆಘಾತವಾಗಿದೆ. ಪಕ್ಷಕ್ಕಾಗಿ ಕೆಲಸ ಮಾಡುವ ಹಿತದೃಷ್ಟಿಯಿಂದ ನನ್ನ ಮನಸ್ಥಿತಿಯನ್ನು ಬದಲಾಯಿಸಿಕೊಂಡೆ. ಆದರೆ ಈ ಬಗ್ಗೆ ಇಂದು ಯಾರಾದರೂ ಕೇಳಿದರೆ ನನ್ನ ನಿರ್ಧಾರ ಸರಿ ಎಂದು ಹೇಳುವೆ. ಪಕ್ಷವನ್ನು ನೋಡಿಕೊಳ್ಳಲು ಹಾಗೂ ನನ್ನ ಅನುಭವದಿಂದ ಸರ್ಕಾರ ಕೂಡ ಪ್ರಯೋಜನ ಪಡೆಯುತ್ತಿದೆ. ಮುಖ್ಯಮಂತ್ರಿ ಹುದ್ದೆಯ ದುರಾಸೆಯಿಂದ ನಾನು ಆ ಹುದ್ದೆ ಅಲಂಕರಿಸಿದರೆ ನನ್ನ ಪಕ್ಷಕ್ಕೆ ತಪ್ಪು ಸಂದೇಶ ಹೋಗುತ್ತದೆ, ಹಾಗಾಗಿ ಪಕ್ಷದ ಆದೇಶದಂತೆ ನಾನು ಉಪ ಮುಖ್ಯಮಂತ್ರಿಯಾದೆ. ಪಕ್ಷದ ಮುಖಂಡರು ಕೂಡ ಸರ್ಕಾರದಲ್ಲಿ ಅನುಭವಿಯಾದವರು ಇರಬೇಕೆಂದು ನನ್ನನ್ನು ಈ ಹುದ್ದೆಗೆ ನೇಮಿಸಿದ್ದಾರೆ” ಎಂದು ಹೇಳಿದ್ದಾರೆ.