ಮಹಾರಾಷ್ಟ್ರ ಚುನಾವಣೆಗೂ ಮುನ್ನ ಇಬ್ಬರು ತಮ್ಮನ್ನು ಸಂಪರ್ಕಿಸಿದ 288 ವಿಧಾನಸಭೆ ಸ್ಥಾನಗಳ ಪೈಕಿ 160 ಸ್ಥಾನಗಳ ಗೆಲುವು ಖಾತರಿಪಡಿಸಬಹುದು ಎಂದು ಹೇಳಿಕೊಂಡಿದ್ದರು. ಆದರೆ ನಾವು ಈ ಆಫರ್ ಅನ್ನು ನಿರಾಕರಿಸಿದ್ದೆವು ಎಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಶನಿವಾರ ಹೇಳಿದ್ದಾರೆ.
ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಅವರು, “ಈ ವ್ಯಕ್ತಿಗಳು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವೆ ಚರ್ಚೆ ನಡೆದಿದೆ. ಆದರೆ ನಾವಿಬ್ಬರು(ರಾಹುಲ್, ಶರದ್) ಅಂತಿಮವಾಗಿ ಆ ಪ್ರಸ್ತಾಪವನ್ನು ತಿರಸ್ಕರಿಸಿದರು. ಇದು ನಮ್ಮ ಮಾರ್ಗವಲ್ಲ” ಎಂದು ತಿಳಿಸಿದ್ದು ಸದ್ಯ ಈ ಹೇಳಿಕೆ ಸಂಚಲನ ಸೃಷ್ಟಿಸಿದೆ.
ಇದನ್ನು ಓದಿದ್ದೀರಾ? ಮೋದಿ ಮತಗಳ ಕಳವು ಮಾಡಿ ಪ್ರಧಾನಿಯಾಗಿದ್ದಾರೆ, ಸಾಬೀತುಪಡಿಸಬಲ್ಲೆವು: ರಾಹುಲ್ ಗಾಂಧಿ
“ನನಗೆ ಆಗ ಆಶ್ಚರ್ಯವಾಗಿತ್ತು. ಆ ಇಬ್ಬರು ಸ್ಪಷ್ಟವಾಗಿ ಗ್ಯಾರಂಟಿ ನೀಡುತ್ತಿದ್ದರೂ ನನಗೆ ಚುನಾವಣಾ ಆಯೋಗದ ಮೇಲೆ ಯಾವುದೇ ಸಂದೇಹ ಬಂದಿರಲಿಲ್ಲ. ನಾನು ರಾಹುಲ್ ಗಾಂಧಿಯವರೊಂದಿಗೆ ಅವರ ಭೇಟಿಯನ್ನು ಏರ್ಪಡಿಸಿದ್ದೆ. ಇಬ್ಬರೂ ಮಾತನಾಡಿದರು. ಈ ರೀತಿಯ ಮಾರ್ಗಗಳು ಸರಿಯಲ್ಲ, ಜನರ ಮುಂದೆ ಹೋಗಿ ಅವರ ಬೆಂಬಲವನ್ನು ಪಡೆಯುವುದೇ ಉತ್ತಮ ಎಂದು ನಿರ್ಧರಿಸಿದೆವು. ಇವರನ್ನು ನಾವು ನಿರ್ಲಕ್ಷಿಸಿದೆವು” ಎಂದೂ ಶರದ್ ಪವಾರ್ ತಿಳಿಸಿದ್ದಾರೆ.
ಹಾಗೆಯೇ ಚುನಾವಣಾ ಅಕ್ರಮಗಳ ಕುರಿತು ರಾಹುಲ್ ಗಾಂಧಿಯವರ ಇತ್ತೀಚೆಗೆ ನೀಡಿದ ಮಾಹಿತಿಯನ್ನು ಪವಾರ್ ಶ್ಲಾಘಿಸಿದರು. ಪ್ರತ್ಯೇಕ ಅಫಿಡವಿಟ್ ಕೋರಿದ ಭಾರತೀಯ ಚುನಾವಣಾ ಆಯೋಗವನ್ನು (ECI) ಟೀಕಿಸಿದರು. “ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆ. ರಾಹುಲ್ ಗಾಂಧಿ ಅವರು ಈಗಾಗಲೇ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದ್ದರಿಂದ ಪ್ರತ್ಯೇಕ ಅಫಿಡವಿಟ್ ಅಗತ್ಯವಿಲ್ಲ” ಎಂದು ರಾಹುಲ್ ಪರ ನಿಂತರು.
“ರಾಹುಲ್ ಗಾಂಧಿಯವರ ಆರೋಪಗಳನ್ನು ಆಳವಾಗಿ ತನಿಖೆ ನಡೆಸಬೇಕು. ನಾವು ಚುನಾವಣಾ ಆಯೋಗದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದೇವೆ. ಹಾಗಿರುವಾಗ ಬಿಜೆಪಿ ನಾಯಕರು ಅಥವಾ ಮುಖ್ಯಮಂತ್ರಿ ಏಕೆ ಪ್ರತಿಕ್ರಿಯಿಸಬೇಕು? ನಮಗೆ ಚುನಾವಣಾ ಆಯೋಗದಿಂದ ಉತ್ತರ ಬೇಕು, ಬಿಜೆಪಿಯಿಂದ ಅಲ್ಲ” ಎಂದು ವಾಗ್ದಾಳಿ ನಡೆಸಿದರು.
ಮಹದೇವಪುರ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಮತ ಕಳವು ನಡೆದಿರುವ ಬಗ್ಗೆ ಕಾಂಗ್ರೆಸ್ ಇತ್ತೀಚೆಗೆ ಡೇಟಾ ಬಿಡುಗಡೆ ಮಾಡಿದೆ. ಇದಾದ ಬಳಿಕ ಕೆಲವು ಮಾಧ್ಯಮಗಳೂ ಮತ ಕಳವು ಬಗ್ಗೆ ಗ್ರೌಂಡ್ ರಿಪೋರ್ಟ್ ಮಾಡಿದೆ. ಇವೆಲ್ಲ ಬೆಳವಣಿಗೆ ನಡುವೆ ಶರದ್ ಪವಾರ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
