- ಇಂಡಿಯಾ ಟುಡೇನ ಮರಾಠಿ ಡಿಜಿಟಲ್ ವಾಹಿನಿ ಮುಂಬೈ ಟಾಕ್ ಸಂದರ್ಶನದಲ್ಲಿ ಶರದ್ ಪವಾರ್ ಮಾತು
- ವಯಸ್ಸಿನ ಕಾರಣದಿಂದ ರಾಜಕಾರಣದಿಂದ ಶರದ್ ಪವಾರ್ ನಿವೃತ್ತಿಗೆ ಸಲಹೆ ನೀಡಿದ್ದ ಅಜಿತ್ ಪವಾರ್
“ನನಗೆ ಇನ್ನೂ ದಣಿವಾಗಿಲ್ಲ. ಹಾಗೆಯೇ ಇನ್ನೂ ನಿವೃತ್ತಿಯೂ ಆಗಿಲ್ಲ” ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ಸಹೋದರನ ಪುತ್ರ ಅಜಿತ್ ಪವಾರ್ ಮಾತಿಗೆ ಶನಿವಾರ (ಜುಲೈ 8) ತಿರುಗೇಟು ನೀಡಿದ್ದಾರೆ.
ತಾವು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಬೇಕು ಎಂದು ಅಜಿತ್ ನೀಡಿದ ಸಲಹೆಗೆ ಶರದ್ ಪವಾರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಪಕ್ಷದ ಕಾರ್ಯಕರ್ತರು ಅಧ್ಯಕ್ಷನಾಗಿ ತಮ್ಮ ಸೇವೆಯನ್ನು ಮುಂದುವರಿಸಲು ಬಯಸಿದ್ದಾರೆ ಎಂದು ಇದೇ ವೇಳೆ ಪವಾರ್ ಹೇಳಿದರು.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೊರಾರ್ಜಿ ದೇಸಾಯಿ ಅವರು ಯಾವ ವಯಸ್ಸಿನಲ್ಲಿ ಪ್ರಧಾನಿ ಆದರು ಎಂಬುದು ಗೊತ್ತಿದೆಯೇ? ನಾನು ಪ್ರಧಾನಿ ಆಗಲು ಅಥವಾ ಸಚಿವನಾಗಲು ಬಯಸುವುದಿಲ್ಲ. ಜನ ಸೇವೆಯೊಂದೇ ನನ್ನ ಧ್ಯೇಯ” ಎಂದು ಹೇಳಿದ್ದಾರೆ.
ಶರದ್ ಪವಾರ್ ಅವರಿಗೆ ಈಗ 83 ವರ್ಷವಾಗಿದೆ. ಇದು ಅವರ ನಿವೃತ್ತಿಗೆ ಸೂಕ್ತ ಸಮಯ ಎಂದು ಅಜಿತ್ ಪವಾರ್ ಹೇಳಿದ್ದರು.
“ನ ಟೈರ್ಡ್ ಹೂಂ, ನ ರಿಟೈರ್ಡ್ ಹೂಂ (ದಣಿವೂ ಆಗಿಲ್ಲ, ನಿವೃತ್ತಿಯೂ ಆಗಿಲ್ಲ)” ಎಂಬ ಅಟಲ್ ಬಿಹಾರಿ ವಾಜಪೇಯಿ ಅವರ ಮಾತನ್ನು ಪವಾರ್ ಅವರು ಇದೇ ವೇಳೆ ಉಲ್ಲೇಖಿಸಿದರು.
ಈ ಸುದ್ದಿ ಓದಿದ್ದೀರಾ? ರಾಜಸ್ಥಾನ ಚುನಾವಣೆ ಬಿಜೆಪಿ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇಮಕ
“ನನಗೆ ನಿವೃತ್ತಿಯ ಸಲಹೆ ನೀಡಲು ಅವರು ಯಾರು? ನಾನು ಇನ್ನೂ ದುಡಿಯಬಲ್ಲೆ” ಎಂದು ಇಂಡಿಯಾ ಟುಡೇನ ಮರಾಠಿ ಡಿಜಿಟಲ್ ವಾಹಿನಿ ಮುಂಬೈ ಟಾಕ್‌ಗೆ ನೀಡಿದ ಸಂದರ್ಶನದಲ್ಲಿ ಪವಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
“ತಮ್ಮ ಪುತ್ರನಲ್ಲ ಎಂಬ ಕಾರಣಕ್ಕೆ ನನ್ನನ್ನು ಶರದ್ ಪವಾರ್ ಕಡೆಗಣಿಸಿದರು” ಎಂಬ ಅಜಿತ್ ಪವಾರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಪವಾರ್, “ಕುಟುಂಬದ ವಿಷಯವನ್ನು ನಾನು ಹೊರಗೆ ಚರ್ಚಿಸಲು ಬಯಸುವುದಿಲ್ಲ. ಅಜಿತ್ ಪವಾರ್ ಅವರನ್ನು ಮಂತ್ರಿ, ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಆದರೆ ಮಗಳು ಸುಪ್ರಿಯಾ ಸುಳೆಗೆ ಯಾವುದೇ ಮಂತ್ರಿ ಹುದ್ದೆ ನೀಡಿಲ್ಲ” ಎಂದು ತಿಳಿಸಿದರು.