ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮೂಲಕ ಮಹಾರಾಷ್ಟ್ರದ ಶಾಲಾ ಪಠ್ಯಕ್ರಮದಲ್ಲಿ ಹಿಂದಿ ಹೇರಿಕೆ ಮಾಡುವುದನ್ನು ವಿರೋಧಿಸಿ ಜುಲೈ 5ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ಪ್ರತಿಭಟನಾ ಮೆರವಣಿಗೆಯನ್ನು ಶರದ್ ಪವಾರ್ ನೇತೃತ್ವದ ಎನ್‌ಸಿಪಿ(ಎಸ್‌ಪಿ) ಕೂಡಾ ಬೆಂಬಲ ವ್ಯಕ್ತಪಡಿಸಿದೆ.
ಎನ್‌ಸಿಪಿ ಅಡಿಯಲ್ಲಿ ತ್ರಿಭಾಷಾ ಸೂತ್ರವನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿದ್ದು, 1ನೇ ತರಗತಿಯಿಂದ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸಿದೆ. ಈ ರೀತಿ ಹಿಂದಿ ಹೇರಿಕೆ ಮಾಡುವುದನ್ನು ವಿಪಕ್ಷಗಳು ತೀವ್ರವಾಗಿ ವಿರೋಧಿಸಿದೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಶಾಲೆಗಳಲ್ಲಿ ಹಿಂದಿ ಹೇರಿಕೆಗೆ ವಿರೋಧ: ಮತ್ತೆ ಒಂದಾದ ರಾಜ್, ಉದ್ಧವ್ ಠಾಕ್ರೆ
“ಮಹಾರಾಷ್ಟ್ರದ ಹಿತಾಸಕ್ತಿ ಅಪಾಯದಲ್ಲಿದೆ, ಹಾಗಾಗಿ ನಾವು ಮಹಾರಾಷ್ಟ್ರದೊಂದಿಗೆ ನಿಲ್ಲುತ್ತೇವೆ. ರಾಷ್ಟ್ರದ ಹಿತಾಸಕ್ತಿ ಅಪಾಯದಲ್ಲಿರುವಾಗ, ನಾವು ರಾಜಕೀಯ ಮಾರ್ಗಗಳನ್ನು ಬದಿಗಿಟ್ಟು ರಾಷ್ಟ್ರದೊಂದಿಗೆ ನಿಲ್ಲುತ್ತೇವೆ. ಅದು ಎನ್‌ಸಿಪಿಯ ಮೂಲ ನೀತಿಯಾಗಿದೆ” ಎಂದು ಎನ್‌ಸಿಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಹೇಳಿದ್ದಾರೆ.
“ಮಗುವಿನ ಮಾತೃಭಾಷೆಯಲ್ಲಿ ಆರಂಭಿಕ ಶಿಕ್ಷಣ ನಡೆಯಬೇಕೆಂದು ವಾದಿಸುವ ಶಿಕ್ಷಣ ತಜ್ಞರು, ಪೋಷಕರು, ಭಾಷಾಶಾಸ್ತ್ರಜ್ಞರು ಮತ್ತು ಕಾರ್ಯಕರ್ತರು ಈ ಕ್ರಮವನ್ನು ವಿರೋಧಿಸಿದ್ದಾರೆ” ಎಂದೂ ಈ ಸಂದರ್ಭದಲ್ಲೇ ಪಾಟೀಲ್ ತಿಳಿಸಿದರು.
“ಮರಾಠಿ ಜನರು ಹಿಂದಿ ಸೇರಿದಂತೆ ಬೇರೆ ಯಾವುದೇ ಭಾಷೆಗಳನ್ನು ಕಲಿಯುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ಪ್ರಾಥಮಿಕ ಹಂತದಲ್ಲಿ ಮಕ್ಕಳ ಮೇಲೆ ಹಿಂದಿಯನ್ನು ಕಡ್ಡಾಯವಾಗಿ ಹೇರಿಕೆ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಎನ್‌ಸಿಪಿ ಹೇಳಿದೆ.
ಇದನ್ನು ಓದಿದ್ದೀರಾ? ಮರಾಠಿಯನ್ನು ದುರ್ಬಲಗೊಳಿಸುವುದನ್ನು ಸಹಿಸಲಾಗದು: ಹಿಂದಿ ಹೇರಿಕೆ ವಿರುದ್ಧ ಸುಪ್ರಿಯಾ ಸುಳೆ ಆಕ್ರೋಶ
“ತ್ರಿಭಾಷಾ ನೀತಿಯನ್ನು ಮಾತೃಭಾಷೆಯನ್ನು ಬದಿಗಿಡಲು ಒಂದು ಸಾಧನವಾಗಿ ಬಳಸುತ್ತಿದ್ದರೆ, ಮರಾಠಿ ಮಾತನಾಡುವ ಸಮುದಾಯವು ಅಂತಹ ಕ್ರಮಗಳನ್ನು ಒಗ್ಗಟ್ಟಿನಿಂದ ವಿರೋಧಿಸುತ್ತದೆ” ಎಂದು ಪಾಟೀಲ್ ತಿಳಿಸಿದ್ದಾರೆ.
ಹಿಂದಿ ಹೇರಿಕೆ ವಿರುದ್ಧವಾಗಿ ಜುಲೈ 5ರಂದು ಮಹಾರಾಷ್ಟ್ರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಈಗಾಗಲೇ ಹಿಂದಿ ಹೇರಿಕೆ ವಿರುದ್ಧ ಠಾಕ್ರೆ ಸಹೋದರರಾದ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಜೊತೆಯಾಗಿದ್ದಾರೆ.
