ಶಿಗ್ಗಾಂವಿ ಕ್ಷೇತ್ರದ ಅಭಿವೃದ್ಧಿಗೆ ಬಸವರಾಜ ಬೊಮ್ಮಾಯಿ ಏನು ಕೊಡುಗೆ ಕೊಟ್ಟಿದ್ದಾರೆ? ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ ಮನೆ ಕೊಡುವ ಕೆಲಸ ಮಾಡಿಲ್ಲ. ಅವರ ಅವಧಿಯಲ್ಲಿ ಬಡವರಿಗೆ ಮನೆ ಕೊಟ್ಟಿದ್ದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಸವಾಲು ಹಾಕಿದರು.
ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಶಿಗ್ಗಾಂವಿ, ಜಕ್ಕನಗಟ್ಟಿ, ಕಾರಡಗಿ, ಸವನಣೂರು, ಬಂಕಾಪುರ ಭಾಗದಲ್ಲಿ ಪ್ರಚಾರ ಸಭೆ, ರೋಡ್ ಶೋ ನಡೆಸಿ ಮಾತನಾಡಿದ ಅವರು, “ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಪ್ರತಿನಿಧಿಸಿದ ಈ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ. ಪಟ್ಟಣದ ರಸ್ತೆ, ಗ್ರಾಮಗಳ ಪರಿಸ್ಥಿತಿ ನೋಡಿದರೆ ಬಸವರಾಜ ಬೊಮ್ಮಾಯಿ ಎಷ್ಟು ಮಟ್ಟಿಗೆ ಅಭಿವೃದ್ಧಿ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ತಂದೆಯ ಕೈಲಿ ಆಗದ ಅಭಿವೃದ್ಧಿ ಮಗನ ಕೈಲಿ ಸಾಧ್ಯವಾ” ಎಂದು ಪ್ರಶ್ನೆ ಮಾಡಿದರು.
“ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ. ಹಿಂದೂ ಮುಸ್ಲಿಂ ಹೆಸರಿನಲ್ಲಿ ಮತ ಪಡೆಯುವುದು. ಜನರನ್ನು ಪ್ರಚೋದಿಸಿ, ತಪ್ಪು ದಾರಿಗೆ ಎಳೆದು ರಾಜಕೀಯ ಲಾಭ ಪಡೆದುಕೊಳ್ಳುವುದು ಅವರ ಹವ್ಯಾಸ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೀಸಲಾತಿಗೇ ಕುತ್ತು ಬಂದಿರುವಾಗ, ಒಳಮೀಸಲಿನ ನಿಜವನ್ನು ಇನ್ನೆಷ್ಟು ಕಾಲ ಮುಂದೂಡುತ್ತೀರಿ?
“ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ನಂತರ ಕಾಂಗ್ರೆಸ್ ಪಕ್ಷ ಕೊಟ್ಟಿದ್ದ ಐದು ಗ್ಯಾರಂಟಿ ಯೋಜನೆ ಈಡೇರಿದೆ. ಆರನೇ ಗ್ಯಾರಂಟಿ ಯಾಗಿ 2.30 ಲಕ್ಷ ಮನೆ ಬಡವರಿಗೆ ಹಂಚುವ ಕ್ರಾಂತಿಕಾರಕ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಶಿಗ್ಗಾಂವಿನಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಯಾಸೀರ್ ಪಠಾಣ್ ಪರವಾಗಿ ಅಜ್ಜಂ ಪೀರ್ ಖಾದ್ರಿ ಜತೆಗೂಡಿ ಕೆಲಸ ಮಾಡಲಿದ್ದಾರೆ. ಇಬ್ಬರೂ ಪಕ್ಷಕ್ಕಾಗಿ ಒಂದಾಗಿ ಸಂದೇಶ ರವಾನಿಸಿದ್ದಾರೆ” ಎಂದರು.
ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಶ್ರೀನಿವಾಸ್ ಮಾನೆ, ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ, ಇಸ್ಮಾಯಿಲ್ ತಮಟಗಾರ, ಅಲ್ತಾಫ್ ಕಿತ್ತೂರು, ಸಯೀದ್ ಅಹಮದ್ ಉಪಸ್ಥಿತರಿದ್ದರು.