ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾಂವಿ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ರಾಜ್ಯದ ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿತ್ತು. ಈ ಹಿಂದೆ ತಾವು ಗೆದ್ದಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳುವ, ಮತ್ತೊಬ್ಬರ ಕ್ಷೇತ್ರವನ್ನು ಕಿತ್ತುಕೊಳ್ಳಲು ಮೂರೂ ಪಕ್ಷಗಳೂ ಅವಣಿಸಿದ್ದವು. ಅಂತೂ, ಉಪಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದೆ. ಮೂರು ಕ್ಷೇತ್ರಗಳಲ್ಲಿಯೂ ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.
ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದ್ದ ನಿಖಿಲ್ ಕುಮಾರಸ್ವಾಮಿ ಸತತ ಮೂರನೇ ಬಾರಿಗೆ ಸೋಲುಂಡಿದ್ದಾರೆ. ಹ್ಯಾಟ್ರಿಕ್ ಹೀರೋ, ಸೋಲಿನ ಸರದಾರ ಎಂಬ ಟ್ರೋಲ್‌ಗೆ ಗುರಿಯಾಗಿದ್ದಾರೆ. ಇನ್ನು ಸಂಡೂರಿನಲ್ಲಿ ತುಕಾರಂ ಅವರ ಪತ್ನಿ ಅನ್ನಪೂರ್ಣ ಅವರು ಗೆಲುವಿನ ನಗೆ ಬೀರಿದ್ದಾರೆ. ಇದೆಲ್ಲರ ನಡುವೆ, ಗಮನಾರ್ಹವಾಗಿ, ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ತನ್ನ ನೆಲೆಯನ್ನೇ ಕೆಳೆದುಕೊಂಡಿದ್ದ ಶಿಗ್ಗಾಂವಿಯಲ್ಲಿಯೂ ಭಾರೀ ಗೆಲುವು ಸಾಧಿಸಿದೆ. ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿದೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಗೆದ್ದು ಬೀಗಿದ್ದಾರೆ.
ಸಂಸದರಾಗಿ ಆಯ್ಕೆಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಶಿಗ್ಗಾಂವಿಯಲ್ಲಿ ನವೆಂಬರ್ 13ರಂದು ಉಪಚುನಾವಣೆ ನಡೆದಿತ್ತು. ಮುಸ್ಲಿಂ ಮತ್ತು ಲಿಂಗಾಯತ ಮತಗಳು ಹಿಚ್ಚಿದ್ದರೂ, ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆ ಮಾಡಿಕೊಂಡಿತ್ತು. ಕ್ಷೇತ್ರವು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯ ಕಾರಣದಿಂದಾಗಿ ರಾಜ್ಯದ ಗಮನ ಸೆಳೆದಿತ್ತು. ಕಾಂಗ್ರೆಸ್ ಟಿಕೆಟ್ ದೊರೆತಿಲ್ಲವೆಂದು ಅಜ್ಜಂಪೀರ ಖಾದ್ರಿ ಅವರು ಕೊನೆ ಕ್ಷಣದಲ್ಲಿ ನಾಟಕೀಯವಾಗಿ ನಾಮಪತ್ರ ಸಲ್ಲಿಸಿ, ಪಕ್ಷದ ನಾಯಕರ ಮನವೊಲಿಕೆಯಿಂದ ನಾಮಪತ್ರವನ್ನು ಹಿಂಪಡೆದಿದ್ದರು. ಇತ್ತ, ಬಿಜೆಪಿಯಲ್ಲಿಯೂ ಮುರುಗೇಶ್ ನಿರಾಣಿ ಸೇರಿದಂತೆ ಹಲವು ಕೇಸರಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಯಾರೂ ಬಹಿರಂಗವಾಗಿ ಬಂಡಾಯದ ಬಾವುಟ ಬೀಸಲಿಲ್ಲ. ಕಾಂಗ್ರೆಸ್ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿಯಿಂದ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಸ್ಪರ್ಧಿಸಿದ್ದರು. ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಿದ್ದು, ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ತಾಂಡವವಾಡುತ್ತಿದೆ ಎಂದ ಆರೋಪ, ಚರ್ಚೆಗೆ ಕಾರಣವಾಗಿತ್ತು.
ಕ್ಷೇತ್ರದಲ್ಲಿ 2008ರಿಂದ ಸತತವಾಗಿ ನಾಲ್ಕು ಬಾರಿ ಗೆದಿದ್ದ ಬಸವರಾಜ್ ಬೊಮ್ಮಾಯಿ, ಐದನೇ ಭಾರಿಗೆ ಪುತ್ರ ಭರತ್ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಿದ್ದರು. ಆದರೆ, ಕ್ಷೇತ್ರದ ಮತದಾರರು ಅವರನ್ನು ಕೈಬಿಟ್ಟಿದ್ದಾರೆ. ಪಠಾಣ್ ಅವರ ಕೈಹಿಡಿದ್ದಾರೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಸಚಿವ ಸತೀಶ್ ಜಾರಕಿಹೊಳಿ ಅವರು ಅವರತ ಪರಿಶ್ರಮವಿದೆ. ಸತೀಶ್ ಅವರ ಶ್ರಮವನ್ನು ಯಾರೂ ಕಡೆಗಣಿಸಲಾಗದು. ಪ್ರತಿ ಬೂತ್ ಮಟ್ಟದಲ್ಲಿಯೂ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ನೇಮಿಸಿ, ಕೆಲಸ ಮಾಡಿದ್ದಾರೆ. ಅವರ ಶ್ರಮದಿಂದಲೇ ಕಾಂಗ್ರೆಸ್ ಗೆದ್ದು ಬೀಗಲು ಸಾಧ್ಯವಾಗಿದೆ.
ಮುಸ್ಲಿಂ ಮತದಾರರೂ ಗಣನೀಯ ಸಂಖ್ಯೆಯಲ್ಲಿರುವ ಶಿಗ್ಗಾಂವಿಯಲ್ಲಿ ನಾಲ್ಕು ಬಾರಿ ಮಾತ್ರವೇ ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಇಂದಿನ ಗೆಲುವು ಮುಸ್ಲಿಂ ಅಭ್ಯರ್ಥಿಯ 5ನೇ ಗೆಲುವಾಗಿದೆ. ಈ ಹಿಂದೆ, 1972, 1978 ಹಾಗೂ 1983ರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ.ಎಂ. ನದಾಫ್ ಗೆಲುವು ಸಾಧಿಸಿದ್ದರೆ, 1999ರಲ್ಲಿ ಸಯ್ಯದ್ ಅಜ್ಜಂಪೀರ್ ಖಾದ್ರಿ ಅವರು ಜೆಡಿಎಸ್‌ನಿಂದ ಗೆದ್ದಿದ್ದರು. ಆದರೆ, 90ರ ದಶಕದ ನಂತರ ಈವರೆಗೆ ಮುಸ್ಲಿಂ ಅಭ್ಯರ್ಥಿ ಗೆದ್ದಿರಲಿಲ್ಲ. ಇದೀಗ, 20 ವರ್ಷಗಳ ಬಳಿಕ ಮುಸ್ಲಿಂ ಅಭ್ಯರ್ಥಿ, 30 ವರ್ಷಗಳ ಬಳಿಕ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ 99,230 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ 85,571 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 13,659 ಇದೆ. ಈ ಮೂಲಕ ಬಿಜೆಪಿ ಭದ್ರಕೋಟೆಯಾಗಿದ್ದ ಶಿಗ್ಗಾಂವಿ ಇದೀಗ ಕಾಂಗ್ರೆಸ್ ಕೈ ಸೇರಿದೆ.
ಶಿಗ್ಗಾಂವಿಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದ್ದರೂ, ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ಯಾವತ್ತೂ ಗಂಭೀರವಾಗಿ ಪ್ರಯತ್ನಿಸಿರಲಿಲ್ಲ. ಗೆಲ್ಲುವ ಅಭ್ಯರ್ಥಿಗಳನ್ನು ಕೂಡ ಕಣಕ್ಕಿಳಿಸಿರಲಿಲ್ಲ. ಈ ಕ್ಷೇತ್ರ ಈ ಬಾರಿಯೂ ಕೂಡ ಬಿಜೆಪಿ ತೆಕ್ಕೆಗೆ ಹೋಗಲಿದೆ ಎಂದು ಹೇಳಲಾಗಿತ್ತು. ಆದರೆ, ಉಪಚುನಾವಣೆಯಾದ್ದರಿಂದ ತನ್ನ ಪ್ರಾಬಲ್ಯವನ್ನು ತೋರಿಸುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿತ್ತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಡಿತದಲ್ಲಿದ್ದ ಶಿಗ್ಗಾಂವಿಯನ್ನು ಕಸಿದುಕೊಳ್ಳಬೇಕೆಂಬ ಹವಣಿಕೆ ಕಾಂಗ್ರೆಸ್ ನಾಯಕರಲ್ಲಿತ್ತು. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು.
ಕ್ಷೇತ್ರದಲ್ಲಿ ಚುನಾವಣಾ ಉಸ್ತುವಾರಿಯನ್ನು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನೀಡಲಾಗಿತ್ತು. ವಾಲ್ಮೀಕಿ, ದಲಿತ, ಮುಸ್ಲಿಂ ಹಾಗೂ ಕುರುಬ ಸಮುದಾಯದ ಮತಗಳನ್ನು ಒಗ್ಗೂಡಿಸುವಲ್ಲಿ ಸತೀಶ್ ಅವರ ಶ್ರಮ ಮತ್ತು ಕಾಂಗ್ರೆಸ್ ನಾಯಕರ ಪ್ರಚಾರ ಫಲಿಸಿತು. ಜೊತೆಗೆ, ಬಿಜೆಪಿ ಹುಟ್ಟುಹಾಕಿದ ವಕ್ಫ್ ವಿವಾದವು ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಹುಟ್ಟುಹಾಕಿತು. ಇದು, ಬೊಮ್ಮಾಯಿ ವಿಚಾರದಲ್ಲಿ ಒಲವು ಹೊಂದಿದ್ದ ಶಿಗ್ಗಾಂವಿಯ ಮುಸ್ಲಿಮರು ಬೊಮ್ಮಾಯಿ ವಿರುದ್ಧ ತಿರುಗಿ ಬಿದ್ದರು. ಈ ಎಲ್ಲ ಕಾರಣಗಳು ಕಾಂಗ್ರೆಸ್ ಗೆಲುವಿಗೆ ಅವಕಾಶ ಮಾಡಿಕೊಟ್ಟಿತು.